'ಶಾಲೆಗೆ ಹೋಗುವ ಮಕ್ಕಳ ಮೇಲೆ ಮೊಬೈಲ್ ಫೋನುಗಳ ಪ್ರಭಾವ'

ಪ್ರಬಂಧ ಮತ್ತು ಪತ್ರ ಲೇಖನ ಆಗಸ್ಟ್ 30, 2026 2 ನಿಮಿಷ ಓದು
'ಶಾಲೆಗೆ ಹೋಗುವ ಮಕ್ಕಳ ಮೇಲೆ ಮೊಬೈಲ್ ಫೋನುಗಳ ಪ್ರಭಾವ'
ಸಾರಾಂಶ (Summary)

'ಶಾಲೆಗೆ ಹೋಗುವ ಮಕ್ಕಳ ಮೇಲೆ ಮೊಬೈಲ್ ಫೋನುಗಳ ಪ್ರಭಾವ' ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆಗಳೇನು ? ವಿವರಿಸಿ:-

"ಕಾಲಾಯ ತಸ್ಮೈ ನಮಃ" ಎನ್ನುವಂತೆ ಕಾಲಬದಲಾದಂತೆ, ನಮ್ಮ ನಮ್ಮ ಅಗತ್ಯಗಳು, ಅವಶ್ಯಕತೆಗಳು ಮತ್ತು ಬೇಡಿಕೆಗಳು ಬದಲಾಗುತ್ತಾ ಹೋಗುತ್ತದೆ. ನಮ್ಮ ಬದಲಾದ ಅವಶ್ಯಕತೆಗಳಿಗೆ ಪೂರಕವಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆಯುತ್ತ ಸಾಗಿದೆ. ಈ ಬೆಳವಣಿಗೆ ಮತ್ತು ಅವಿಷ್ಕಾರದ ಬಹುಮುಖ್ಯ ಭಾಗವೇ ಮೊಬೈಲ್ ಫೋನ್.

ಮೊಬೈಲ್ ಫೋನುಗಳು ಈಗಿನ ಕಾಲದಲ್ಲಿ ಅತಿಹೆಚ್ಚು ಮಹತ್ವದ ಸ್ಥಾನವನ್ನು ಪಡೆದುಕೊಂಡಿದೆ. ಶ್ರೀಮಂತನಿಂದ ಬಡವನವರೆಗೆ, ಮಕ್ಕಳಿಂದ ಮುದುಕರವರೆಗೆ, ಎಲ್ಲರಿಗೂ ಅಗತ್ಯವಾದ ವಸ್ತುವಾಗಿದೆ. ಈ ಫೋನುಗಳು ಈಗ ಮಾತುಕ ತೆಗಳಿಗಷ್ಟೇ ಸೀಮಿತವಾಗಿರದೆ ಬ್ಯಾಂಕ್ ವ್ಯವಹಾರ, ಕ್ಯಾಲೆಂಡರ್, ಕ್ಯಾಮರಾ, ಸುದ್ದಿ ಮಾಧ್ಯಮ, ಮಾಹಿತಿ ಕೇಂದ್ರ, ವಧು ವರಾನ್ವೇಷಣೆ ಹೀಗೆ ಹತ್ತು ಹಲವು ಸೌಲಭ್ಯಗಳನ್ನು ಒದಗಿಸಿ ಕೊಡುತ್ತಾ ಎಲ್ಲರಿಗೂ ಸಹಕಾರಿಯಾಗಿದೆ.

ಶಾಲೆಗೆ ಹೋಗುವ ಮಕ್ಕಳ ಪಾಲಿಗೆ ಇದೊಂದು ವರವಾಗಿ ಪರಿಣಯಿಸಿದೆ. ಶಾಲಾ ಕಾಲೇಜುಗಳಲ್ಲಿ ನೀಡುವ ಮನೆಕೆಲಸಗಳನ್ನು ಮಾಡಲು, ಕಾರ್ಯ ಯೋಜನೆಗಳನ್ನು ಪೂರ್ಣಗೊಳಿಸಲು, ಓದಿಗೆ ಸಂಬಂಧಿಸುವ ಸಮಸ್ಯೆಗಳಿಗೆ ತಕ್ಷಣ ಪರಿಹಾರವನ್ನು ಕಂಡುಕೊಳ್ಳಲು, ಹೀಗೆ ಹತ್ತು ಹಲವು ರೀತಿಯಲ್ಲಿ ನೆರವಾಗುತ್ತದೆ. ಈಗಂತೂ ಚಾಟ್ ಜಿಪಿಟಿ, ಜೆಮಿನೈ, ಮೇಟಾ ಮುಂತಾದ ವೇದಿಕೆಗಳು ಬಹಳ ಉಪಯುಕ್ತವಾಗಿದೆ.

ಆದರೆ ಮೊಬೈಲ್ ಫೋನುಗಳಿಂದ ಅನುಕೂಲಗಳಿರುವಂತೆ ಅನಾನುಕೂಲಗಳೂ ಇವೆ. ವಿದ್ಯಾರ್ಥಿಗಳು ತಮ್ಮ ಓದಿನ ಕಡೆಗೆ ಗಮನ ಹರಿಸದೆ ಮೊಬೈಲ್ ಫೋನುಗಳ ಚಟಕ್ಕೆ ಬಿದ್ದು ಸದಾ ಒಂದೆಡೆ ಕುಳಿತು ನೋಡುವುದರಿಂದ ದೇಹದಲ್ಲಿ ಕೊಬ್ಬಿನ ಅಂಶ ಹೆಚ್ಚಾಗುವುದರ ಜೊತೆಗೆ ಚಿಕ್ಕ ವಯಸ್ಸಿನಲ್ಲಿಯೇ ಹಲವಾರು ಕಾಯಿಲೆಗಳಿಗೆ ಈಡಾಗುತ್ತಿದ್ದಾರೆ. ನೂರರಲ್ಲಿ ಕನಿಷ್ಟ ಪಕ್ಷ ಅರವತ್ತು ಮಂದಿಗೆ ದೃಷ್ಟಿ ದೋಷ ಉಂಟಾಗುತ್ತದೆ ಓದಿನಲ್ಲಿ ಆಸಕ್ತಿಯನ್ನು ಕಳೆದುಕೊಂಡು ವಿದ್ಯಾಭಾಸದಲ್ಲಿ ಕುಂಠಿತವಾಗುತ್ತಿದೆ. ದೈಹಿಕ ವ್ಯಾಯಾಮದ ಕೊರತೆ ಉಂಟಾಗುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ, ಪ್ರತಿಯೊಂದು ವಸ್ತುವಿನಲ್ಲಿಯೂ ಅನುಕೂಲ ಮತ್ತು ಅನಾನುಕೂಲಗಳು ಇದ್ದೇ ಇರುತ್ತವೆ. ಆದರೆ ನಾವು ಯಾವುದಕ್ಕೆ ಅದನ್ನು ಬಳಸಿಕೊಳ್ಳುತ್ತಿದ್ದೇವೆ ಎಂಬುದರ ಮೇಲೆ ಅದರ ಉಪಯೋಗ ಮತ್ತು ದುರ್ಬಳಕೆ ಅವಲಂಬಿತವಾಗಿರುತ್ತದೆ. ಆದ್ದರಿಂದ ವಿದ್ಯಾರ್ಥಿಗಳಾದ ನಾವು ಮೊಬೈಲ್ ಫೋನುಗಳನ್ನು ಅಗತ್ಯವಿದ್ದಾಗ ಮಾತ್ರ ಬಳಸಬೇಕು. ಫೋನು ನೋಡುವುದರ ಬದಲು ಪುಸ್ತಕಗಳನ್ನು ಓದುವುದರ ಕಡೆಗೆ ಗಮನ ಹರಿಸಬೇಕಿದೆ.

ಅರುಣಾ ರಾವ್

ಲೇಖಕರು

Chief Editor & Author

ವಿದ್ಯಾರ್ಥಿಗಳಿಗೆ ಸರಳ, ನಿಖರ ಹಾಗೂ ಉಪಯುಕ್ತ ಶೈಕ್ಷಣಿಕ ಮಾಹಿತಿ, ಭಾಷಣಗಳು ಮತ್ತು ವಿಜ್ಞಾನ ಮಾರ್ಗದರ್ಶನ ನೀಡುತ್ತಿರುವ ಮುಖ್ಯ ಸಂಪಾದಕರು.