ಕಲ್ಲಂಗಡಿ
ಕಲ್ಲಂಗಡಿ ಮಾರುವ ಕಿಟ್ಟಪ್ಪ
ನನಗೊಂದು ಹೋಳು ತತ್ತಾಪ್ಪ
ಎನ್ನುತ ಶ್ಯಾಮನು ರೊಕ್ಕವ ನೀಡಿ
ಕೊಂಡನು ಒಂದು ಹೋಳಪ್ಪ
ಹಣ್ಣನು ತಿನ್ನುವ ಭರದಲ್ಲಿ
ಬೀಜವು ನುಗ್ಗಿತು ಗಂಟಲಲಿ
ಕೆಮ್ಮಿ ಕೆಮ್ಮಿ ಸೋತನು ಹೊರಗೆ
ತೆಗೆಯುವ ವ್ಯರ್ಥ ಪ್ತಯತ್ನದಲಿ
ಗಟಗಟ ನೀರನು ಹೀರಿದನು
ಬಲು ಜೋರಲಿ ಕ್ಯಾಕರಿಸಿದನು
ಕಲ್ಲಂಗಡಿ ಬೀಜವು ಹೊಟ್ಟೆಯಲಿ
ಸೇರಿತೆಂದು ಅಳತೊಡಗಿದನು
ಅಮ್ಮನ ಬಳಿಗೆ ಓಡಿದನು
ಸತ್ತೆನು ಎಂದು ಒರಲಿದನು
ಹೊಟ್ಟೆಯಲಿ ಗಿಡ ಬೆಳೆದರೆ ಗತಿ
ಏನೆನ್ನುತ ಬಲು ಗೋಳಾಡಿದನು
ತಾಯಿಯು ಉಪಾಯ ಹೂಡಿದಳು
ಶ್ಯಾಮಗೆ ಕಕ್ಕಲು ಹೇಳಿದಳು
ಬೀಜವೊಂದನು ಕಾಣದೆ ಇರಿಸಿ
ಬಾಯಿಂದ ಬಿತ್ತೆಂದು ತಿಳಿಸಿದಳು
ಶ್ಯಾಮಗೆ ಸಂತಸ ಅತಿಯಾಯ್ತು
ಚಿಂತೆಯು ಕ್ಷಣದಿ ಕಳೆದೋಯ್ತು
ತಾಯಿಯ ಕೆನ್ನೆಗೆ ಮುತ್ತನು ಒತ್ತಿ
ಆಡಲು ರಸ್ತೆಗೆ ಇಳಿದಾಯ್ತು
ಅರುಣಾ ರಾವ್