ಹಳ್ಳಿ ಹೈದರು ಮಕ್ಕಳ ನಗೆ ನಾಟಕ | Jnana Kirana

Village Lads – A Comedy Play

ಮಕ್ಕಳ ಕಿರು ನಾಟಕಗಳು ಆಗಸ್ಟ್ 28, 2026 3 ನಿಮಿಷ ಓದು
ಹಳ್ಳಿ ಹೈದರು ಮಕ್ಕಳ ನಗೆ ನಾಟಕ | Jnana Kirana
ಸಾರಾಂಶ (Summary)

ಮಕ್ಕಳಿಗಾಗಿ ಅತ್ಯಂತ ತಮಾಷೆಯ ಕನ್ನಡ ನಗೆ ನಾಟಕ 'ಹಳ್ಳಿ ಹೈದರು'. ಶಾಲಾ ಸಾಂಸ್ಕೃತಿಕ ಸ್ಪರ್ಧೆಗಳಿಗೆ ಸೂಕ್ತವಾದ ಪೂರ್ಣ ನಾಟಕದ ಸಂಭಾಷಣೆ ಇಲ್ಲಿದೆ.

ದೃಶ್ಯ -೧

ಕಾತಲಕಟ್ಟು ಕ ಸಾಂಗ್) ಹೇಳಿಕೊಂಡು ಮೂವರು ಡ್ಯಾನ್ಸ್ ಮಾಡಿಕೊಂಡು ಬರುವರು.

ಎಂಕ- ನೀನೇನೆ ಹೇಳು ಕನ್ನಡ ಅಂದ್ರೆ ನಂಗೆ ಪಂಚ್ ಪ್ರಾಣ

ಸೀನ- ನನಗೂ ಆಟೇಯಾ, ಆದರೆ ಒಂದೇ ಒಂದು ತೊಂದ್ರೆ ಐತೆ ನೋಡು

ಎಂಕ - ಏನಪ್ಪಾ ನಿಂಗೆ ಅಂತ ತೊಂದ್ರೆ?

ಮಾದ - ಉತ್ತರನ ಬಾಯಲ್ಲಿ ಹೇಳುವಂತೆ ಪಟ್ ಪಟ ಅಂತ ಹೇಳ್ಬಿಡ್ತೀನಿ. ಆದ್ರೆ ಬರೀಬೇಕಾದ್ರೆ ನೋಡೂ................. ಬರೋದು ನಿಜವಾದ ಪೀಕಲಾಟ

ಉತ್ತರ ಪತ್ರಿಕೆ ತುಂಬಾ ಸೊನ್ನೆ ಸುತ್ತಿರೋದು ನೋಡಿ ಮೊನ್ನೆ ಗೊಳೋ ಅಂತ ಅತ್ಬುಟ್ಟೆ ಕಣೋ ( ಮತ್ತೊಮ್ಮೆ ಬಿಕ್ಕಳಿಸಿ ಬಿಕ್ಕಳಿಸಿ ಅಳುವನು)

ಎಂಕ - ಏ........ಸಾಕ್ ನಿಲ್ಸೋ ನಿನ್ನ ಅಳೂನ... ನಂಗೂ ಅಂಗೇ ಆಯ್ತಾ ಇದೆ. ನಾನು ನಗ್ನಗ್ತಾ ಇಲ್ವಾ ಮತ್ತೇ.....

ಸೀನ- ಅದ್ಯಾರೋ ಅಲ್ಲಿ ಬರ್ತಾ ಇರೋದು? (ಎಲ್ಲರೂ ಆಶ್ಚರ್ಯದಿಂದ ಆಕಡೆ ನೋಡುವರು)

(ಹಾರುತಿದೆ ಲವ್ ಬರ್ಡ್ಸುಗಳು ಹಾಡಿನ‌ ಜೊತೆ ನೃತ್ಯ ಮಾಡುತ್ತಾ ಮಾರೇಗೌಡನ ಆಗಮನ)

ಎಂಕ - ಯಾರೀ ಸರ ನೀವು

MG - ಐಯಾಮ್ ಮಿಸ್ಟರ್ selling Gowda

ಸೀನ - ಏ........ ನೀನು......... ನೀನು............ ನಮ್ ಮಾರಣ್ಣ ಅಲ್ವೇನ್ಲಾ

MG - ಡೋಂಟ್ ಕಾಲ್ ಮಿ ಮಾರಣ್ಣ ಕಾಲ್ ಮಿ selling Gowda....OK.......

ಸೀನ- ನಿಮ್ಮಪ್ಪ ನಿನ್ನ ಇಂಗ್ಲೀಷ್ ಮೀಡಿಯಂ ಇಸ್ಕೂಲಿಗೆ ಸೇರಿಸಿದ್ ತಕ್ಷಣ ಹೆಸರೂ ಬದಲಾಗೋಯ್ತೇನೋ?

MG - ಯು ಫೂಲ್ಸ್, ಅದು ಹಾಗಲ್ಲ, ಮಾರಣ್ಣ ಅಂದ್ರೆ ಓಲ್ಡ್ style ಅಂತ ನಾನೇ ಸ್ವಲ್ಪ ಚೇಂಜ್ ಮಾಡ್ಕೊಂಡಿದ್ದೀನಿ....... ಅಂಡರ್ಸ್ಟ್ಯಾಂಡ್.... You better understand

ಸೀನ - ಓಹೋಹೋ ಇವನು ಬಾರೀ ಬಾರೀ ಇಂಗ್ಲೀಷ್ ಕಲ್ತು ಬಿಟ್ಟಿದ್ದಾನೆ ಅಂತ ಇವನ್ಗೆ ತಲೇನೇ ನಿಲ್ತಾ ಇಲ್ಲ ಕಣೋ.......

ಎಂಕ - ಹೌದ್ಕಣೋ........

ಸೀನ - ಅಂಗಂದ್ರೆ.........ಅಂಗಂದ್ರೆ

ನಾವು ಏನೇ ಹೇಳಿದ್ರೂ ನೀನು ಅದನ್ನ ಇಂಗ್ಲೀಷ್ ನಾಗೆ ಹೇಳ್ತೀಯಾ ಮತ್ತೇ?

MG - ಓಹೋ......... ಅಯ್ ನೋ ಎವರಿತಿಂಗ್. ಆಸ್ಕ್ ಮೀ

ಸೀನ - ಅಂಗಾದ್ರೆ .............ಅಂಗಾದ್ರೆ

ನಮ್ಮೇಷ್ಟು ಯಾವಾಗ್ಲೂ ಹೇಳ್ತಿರ್ತಾ ಇರ್ತಾರಲ್ಲಾ ಗಾದೆ, ಅದೇನ್ಲಾ......( ತಲೆ ಕೆರೆದುಕೊಳ್ಳುತ್ತಾ) "ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತಾ......

ಅಂತ ಅದನ್ನ ಇಂಗ್ಲೀಷಿನಾಗೆ ಹೇಳು ಮತ್ತೆ ನೋಡುಮಾ

MG - that is soooo easy, plant is bending but tree is not bending....

ಎಲ್ಲರೂ ಖುಷಿಯಿಂದ ಚಪ್ಪಾಳೆ ತಟ್ಟುವರು.

ಎಂಕ- ಈಗ ನಾನು ಕಣ್ಲಾ.......... ಈಗ ನಾನು..‌.ನಾನು.........

MG - Yes tell me?

ಎಂಕ - ಅತ್ತೆಗೊಂದು ಕಾಲ ಸೊಸೆಗೊಂದು ಕಾಲ

ಬಿರ್ನೆ ಹೇಳು ಮತ್ತೆ.....................

MG - ವೈಟ್, ಅಯಾಮ್ ಥಿಂಕ್

Mother in-law one time,

Daughter in-law one time

ಎಂಕ - ಏನೋ ಈ ಪಾಟಿ ಇಂಗ್ಲಿಷ್ ಕಲ್ತುಬಿಟ್ಟಿದ್ಯಲ್ಲೋ........ನೀನು ನಿಜವಾಗ್ಲೂ ಪಂಟ..ಕಣೋ.‌

ಸೀನ_ ಇರೋ ನಂದು ಇನ್ನೂ ಒಂದದೆ.

ಎಂಕ _ಏನು? (ಗಾಬರಿಯಿಂದ ಕೇಳುವನು)

ಸೀನ_ ( ನಗುತ್ತಾ) ಗಾದೆ..... ಅದನ್ನೇನಾರಾ ಇವ್ನು ಹೇಳ್ಬಿಟ್ರೆ ಇವ್ನು ಪಂಟ ಅಂತ ನಾನೂ ಒಪ್ಕೊಂಡೇ ಬಿಡೋದೇಯಾ

MG- me you ask again..... Ask fast, I going meeting friends..... I late...

ಸೀನ - ತಡ್ಕಳಪ್ಪ ನಾವೂ ನಿನ್ನ ಸ್ನೇಹಿತ್ರೇಯಾ

ಅವನೇನೋ ಕೇಳ್ತಾನಂತೆ ವಸಿ ತಡ್ಕಾ....

ಎಂಕ_ಪಾಲಿಗೆ ಬಂದದ್ದು ಪಂಚಾಬೃತ

ಇದನ್ನ ಇಂಗ್ಲೀಷ್ ನಲ್ಲಿ ಹೇಳು ನೋಡೋಮಾ..............

MG - ದಿಸ್ ಈಸ್ ವೆರಿ ಸಿಂಪಲ್

ಸೀ....( ಪಕ್ಕಕ್ಕೆ ಹೋಗಿ ಕೈಕೈ ಇಸುಕಿಕೊಳ್ಳುತ್ತಾ) ( ಸ್ವಗತ) ಏನಪ್ಪಾ ಮಾಡೋದು, ಏನೇನೋ ಕೇಳತವ್ರೆ....... ಈ ಹಳ್ಳಿ ಗುಗ್ಗುಗಳಿಗೆ ಇಂಗ್ಲೀಷ್ ಎಲ್ಲಿ ಬರ್ತೈತೆ... Me manage (ಎಂದುಕೊಂಡು ಮತ್ತೆ ಅವರ ಬಳಿಗೆ ಬರುವನು)

Part comes milk, curd, auger, honey .........ghee....bla bla bla bla

All mixing mixing mixing.

That's all.........,....

ಎಂಕ- ಇಲ್ಲಿ ಪಂಚಾಬೃತ ಎಲೈತೆ ( ತಲೆ ಕೆರೆದುಕೊಂಡು)

ಸೀನ_ ಎಲೈತೆ?

MG - you fools......... ಹಾಲು ಮೊಸರು ತುಪ್ಪ ಜೇನುತುಪ್ಪ, ಸಕ್ಕರೆ ಸೇರ್ಸಿದಾಗ ತಾನೇ ಪಂಚಾಮೃತ ಆಗೋದು......

(ಖುಷಿಯಿಂದ ಚಪ್ಪಾಳೆ ತಟ್ಟುವರು)

ಎಂಕ - ಪಾಲಿಗೆ ಬಂದದ್ದು ಎಲೈತೈ?

MG - you don't know English you quite...... ಹೇಳಿದ್ನಲ್ಲಾ,

ಪಾಲಿಗೆ ಬಂದದ್ದು ಅಂದ್ರೆ Part comes......

(ಚಪ್ಪಾಳೆ)

ಸೀನ - ನಂದಿನ್ನ ಒಂದೇ ಒಂದು......

MG_ fast tell...( ಎನ್ನುತ್ತಾ ವಾಚನ್ನು ನೋಡಿಕೊಳ್ಳುವನು)

ಎತ್ತು ಏರಿಗೆ ಎಳೆದ್ರೆ ಕೋಣ ನೀರಿಗೆ ಎಳೀತಂತೆ

ಯುಮೀನ್ ox bund pulling pulling, buffalo water pulling pulling that's all......

(ಮತ್ತೆ ಚಪ್ಪಾಳೆ)

ಎಂಕ_ಏಯ್ ಸಂಜೆ ಎಂಟುಗಂಟೆ ಆಗೋಯ್ತು. ನಾಟಕದ ತಾಲೀಮು ಅಗಲೇ ಶುರು ಆಗೋಗಿರ್ತದೆ......ನಾನು ಹೋಗೀನಪ್ಪ.

ಸೀನ_ ಹೌದು ಕಣ್ಲಾ, ನಡೀ ಬಿರ್ರನೆ

MG- me also coming, you waiting.

(ಅವರ ಹಿಂದಿಂದೆ ಓಡುವನು)

ದೃಶ್ಯ -೨

( ನಾಟಕದ ಮೇಷ್ಟ್ರು ಹಾರ್ಮೋನಿಯಂ ಪೆಟ್ಟಿಗೆಯನ್ನು ಮೂಲೆಯಲ್ಲಿ ಇಟ್ಟು, ಕಸ ಗುಡಿಸುತ್ತಿದ್ದಾನೆ)

ಕೆಂಪ- ಕೊಡಿ ಮೇಷ್ಟ್ರೇ ಇಲ್ಲಿ, ನಾವೆಲ್ಲಾ ಇರುವಾಗ ನೀವ್ ಯಾಕ್ ಮಾಡಬೇಕು?

ಮೇಷ್ಟು- ಈ ಕೆಲ್ಸ ಎಲ್ಲಾದ್ರೂ ಹಾಳಾಗೋಗ್ಲಿ, ನೆನ್ನೆ ಹೇಳಿಕೊಂಡು ಡೈಲಾಗ್ ಚೆನ್ನಾಗಿ ಕಲಿತುಕೊಂಡು ಬಂದಿದ್ದೀ ತಾನೇ(ಪರಕೆ ಬಿಸಾಡಿ ಸೊಂಟದ ಮೇಲೆ ಎರಡೂ ಕೈಗಳನ್ನು ಇಟ್ಡುಕೊಂಡು ಪ್ರಶ್ನಿಸುವರು)

ಕೆಂಪ- ಓಹೋ ತುಂಬಾ ಚೆನ್ನಾಗಿ ಕಲ್ತಿದ್ದೀನಿ

ಮೇಷ್ಟೇ, ನಂಗೆ ಆಶೀರ್ವಾದ ಮಾಡಿ.....

( ಕಾಲಿಗೆ ನಮಸ್ಕರಿಸುವನು)

ಮೇಷ್ಟು- ನನ್ನ ಆಶೀರ್ವಾದ ಯಾವಾಗಲೂ ನಿನ್ನ ಮೇಲೆ ಇರುತ್ತೆ ಏಳಪ್ಪ ಏಳು (ಭುಜ ಹೇಳಿದ್ದು ಎಬ್ಬಿಸುವರು)

ಮೇಷ್ಟು- ಎಲ್ಲಿ ಹೇಳು ನೋಡೋಣ ಮತ್ತೆ.

ಕೆಂಪ- ಈಗ ಹೇಳೇ ಬಿಡೀನಿ ಮೇಷ್ಟೇ ನಂಗೆ ಆಶೀರ್ವಾದ ಮಾಡಿ( ಮತ್ತೆ ಕಾಲಿಗೆ ಬೀಳುವನು)

ಮೇಷ್ಟು- ಆಯ್ತಪ್ಪ ಆಶೀರ್ವಾದ ಮಾಡಿದ್ದೀನಿ ಡೈಲಾಗ್ಹೇಳು

ಕೆಂಪ- ಹೇಳೇ ಬಿಡ್ತೀನಿ, ಸರಿಯಾಗಿ ಕೇಳಸ್ಕಳ್ಲಿ ಆಮ್ಯಾಕೆ........

ಮೇಷ್ಟು_ ಕೇಳಿಸ್ಕೊಳ್ತಾ ಇದೀನಿ, ಬೇಗ ಹೇಳೋ

ಕೆಂಪ- ಮೇಷ್ಟ್ರೇ! ನಿನ್ನೆ ರಾತ್ರಿ ಊಟ ಮಾಡುವಾಗ, ಬೆಳಿಗ್ಗೆ ಹಲ್ಲುಜ್ಜುವಾಗ, ಆಮೇಲೆ ಬಟ್ಟೆ ಒಗೆಯೋವಾಗ ಕೂಡ ಡೈಲಾಗ್ ಹೇಳ್ತಾನೇ ಇದ್ದೆ ಮೇಷ್ಟ್ರೇ

ಮೇಷ್ಟು- ಸರಿ ಕಣಯ್ಯ, ಚೆನ್ನಾಗಿ ಪ್ರಾಕ್ಟೀಸ್ ಮಾಡಿದ್ದೀಯಾ ಅಂತ ಆಯ್ತು. ಈಗ ಡೈಲಾಗ್ ಹೇಳು.( ಅಸಹನೆಯಿಂದ ನುಡಿಯುವರು)

ಕೆಂಪ- ನಂಗಾಶೀರ್ವಾದ ಮಾಡಿ ಮೇಷ್ಟ್ರೇ (ಮತ್ತೆ ಕಾಲಿಗೆ ಬೀಳುವನು)

ಮೇಷ್ಟು- ಆಶೀರ್ವಾದದ ಮನೆ ಹಾಳಾಗ ಹೇಳೋ( ಸಹನೆ ಮೀರಿ ಹೋಗಿ ಅರಚುವರು

ಕೆಂಪ- ಮತ್ತೆ ಮತ್ತೆ.....( ತಲೆ ಕೆರೆದುಕೊಳ್ಳುತ್ತಾ) ನೀವೊಸಿ ಅಂಗನ್ನಿ ಮತ್ತೆ, ನೀವಂಗಂದ್ರೆ ನಾನು ಇಂಗಂದು ಬುಡ್ತೀನಿ( ಹಲ್ಲು ಕಿರಿಯುವನು)

ಮೇಷ್ಟು - ಸರಿಯಾಗಿ ಕೇಳಸ್ಕೋ, ಸರಿಯಾಗಿ ನೋಡ್ಕೋ, ಇನ್ನೊಂದು ಸಾರಿ ನಾನು ಹೇಳಲ್ಲ

ಕೆಂಪ- ಆಗ್ಲಿ ಮೇಷ್ಟೇ

ಮೇಷ್ಟು- ಅತಳ ವಿತಳ ಸುತಳ ರಸಾತಳ ತಳಾತಳ ಪಾತಾಳ ಮುಂತಾದ ಛಪ್ಪನ್ನೈವತ್ತಾರು ದೇಶಗಳಲ್ಲಿ ನನ್ನಂತ ವೀರರಿದ್ದಾರೆಯೇ? ( ಪೌರುಷದಿಂದ ಮೀಸೆ ತಿರುವುತ್ತಾ ಹೇಳುವರು)

ಕೆಂಚ- ಈಗ ಹೇಳ್ತೀನಿ ನೋಡಿ ಮೇಷ್ಟ್ರೇ

ನನಗೆ ಆಶೀರ್ವಾದ ಮಾಡಿ.

ಮೇಷ್ಟ್ರು- ಆಯ್ತು ಹೇಳಯ್ಯ

ಕೆಂಚ- ಅವನತಲೆ, ಇವನತಲೆ, ನಂತಲೆ ನಿಮ್ತಲೆಗಳಲ್ಲಿ ಮುಂತಾದ ಚಪ್ಪರ್ ಐವತ್ತಾರು ದೇಶಗಳಲ್ಲಿ ನನ್ನಂತ ವೀರನಿದ್ದಾನೆಯೇ?

ಮೇಷ್ಟ್ರು- ಚಪ್ಪರ್ ಅಲ್ಲ ಕಣೋ ....ಛಪ್ಪನೈವತ್ತಾರು. ( ತಲೆ ಚಚ್ಚಿಕೊಳ್ಳುವರು)

ಕೆಂಚ -ನೀವು ಆಯಾಸ ಮಾಡ್ಕೋಬೇಡಿ ಮೇಷ್ಟೇ, ಈಗ ಸರಿಯಾಗಿ ಹೇಳ್ತೀನಿ ನೋಡಿ.

ಮೇಷ್ಟು- (ತಲೆ ತಲೆ ಚಚ್ಚಿಕೊಳ್ಳುತ್ತಾ) ನಿನ್ನ‌ ಡೈಲಾಗ್ ಕೇಳ್ತಾ ಇದ್ರೆ ನಂಗೆ ಚಳಿ ಜ್ವರ ಬರ್ತಾ ಇದೆ......ಪಾರ್ಟು ಕೊಡಿ ಪಾರ್ಟು ಕೊಡಿ ಅಂತ ನನ್ ತಲೆ ತಿಂತೀಯಾ, ಒಂದು ಡೈಲಾಗು ನೆಟ್ಟಗೆ ಹೇಳಕ್ಕಾಗಲ್ಲಾ, ಹೋಗ್ಲಿ ಆ ಮೂಲೆನಲ್ಲಿಟ್ಡಿರೋ ಗದೆನ ಎತ್ತಿಕೊಂಡು ಬಾ

ಕೆಂಚ- ( ಗದೆಯನ್ನು ಕಂಕುಳಲ್ಲಿಟ್ಟುಕೊಂಡು ವೀರಾವೇಶದಿಂದ ಬರುವನು)

ಮೇಷ್ಟು- ರಾಮ ರಾಮಾ...... ಅದನ್ನ ಹಂಗಲ್ಲ ಕಣೋ ಎತ್ತಿಕೊಳ್ಳೋದು, ಇಂಗೆ ( ಗದೆಯನ್ನು ಎಡ ಭುಜದ ಮೇಲಿಟ್ಡುಕೊಂಡು ತೋರಿಸುವರು)

ಕೆಂಚ- ಕೊಡೀ ಮೇಷ್ಟೇ ಅದನ್ನ ನಂಗೊತ್ತು ( ಗದೆ ತೆಗೆದುಕೊಳ್ಲಲು ಹೋಗಿ, ಮೇಷ್ಟ ಕಾಲ ಮೇಲೆ ಬೀಳಿಸಿ ಬಿಡುವನು)

ಮೇಷ್ಟು- (ನೋವಿನಿಂದ) ಅಯ್ಯಯ್ಯೋ

ಕೆಂಚ- ಕ್ಷಮಿಸಿಬಿಡಿ ಮೇಷ್ಟು, ಗೊತ್ತಾಗಲಿಲ್ಲ ( ಅವರನ್ನು ಸಮಾಧಾ ಮಾಡಲು ಹೋಗಿ

ಮೇಷ್ಟ ಇನ್ನೊಂದು ಕಾಲನ್ನು ತುಳಿದು ಬಿಡುವನು)

ಮೇಷ್ಟು-ಅಯ್ಯೋ ಹಾಳಾದವ್ನೆ (ನೋವಿನಿಂದ ಕುಂಟುತ್ತಾ ಕುಂಟುತ್ತಾ ಅಷ್ಟು ದೂರ ಹೋಗಿ ನಿಲ್ಲುವರು)

ಕೆಂಚ- ಈ ಡೈಲಾಗ್ ಬರಲ್ಲಾ ಅಂದ್ರೆ ಏನಾಯ್ತು, ಇನ್ನೊಂದು ಹೇಳ್ಕೊಡಿ, ನಾನು ಸರಿಯಾಗಿ ಹೇಳಲಿಲ್ಲ ಅಂದ್ರೆ ಕೇಳಿ,(ಸವಾಲು ಹಾಕುವನು)

ಮೇಷ್ಟು - ಈಗ ನಾನು ಹೇಳೋ ಡೈಲಾಗು ಸರಿಯಾಗಿ ಹೇಳಿಲ್ಲಾ ಅಂದ್ರೆ ಇನ್ಯಾವತ್ತೂ ಪಾರ್ಟು ಕೊಡಿ ಅಂತ ಕೇಳಬಾರ್ದು

ಕೆಂಚ ( ಆವೇಶದಿಂದ)ಅಂಗೇ ಆಗ್ಲಿ ಮೇಷ್ಟೇ

ಮೇಷ್ಟು- ಸರಿ ಹಾಗಾದ್ರೆ,( ಗಂಟಲನ್ನು ಸರಿ ಮಾಡಿಕೊಂಡು) ಏನು ಪಾರ್ಥಾ, ಕೆಂಗಣ್ಣಿನಿಂದ ಕೆಕ್ಕರಿಸಿ ನೋಡಿ ನೀನು ನನ್ನ ಗೆಲ್ಲಲಾರೆ ಈಗ ಆ ಶಕ್ತಿ ನಿನ್ನಲ್ಲಿಲ್ಲ......

ಹೇಳು ನೋಡೋಣ

ಕೆಂಚ- ಇಷ್ಟೇನಾ ಮೇಷ್ಟ್ರೇ ನೋಡಿ ನಾನು ಹೇಗೆ ಹೇಳ್ತೀನಿ ಅಂತ( ಗಂಟಲನ್ನು ಸರಿ ಮಾಡಿಕೊಂಡು) ಏನಪ್ಪಾ ಅತ್ರೆ ಆ ಕೆಂಗೇರಿ ಮೋರಿಯ ವಾಸನೆಯನ್ನು ನಾನು ಸಹಿಸಲಾರೆ ನನ್ನ ಕೈಯಲ್ಲಿ ಆಗಕ್ಕಿಲ್ಲಪ್ಪೋ ಆಗಕ್ಕಿಲ್ಲಾ (ಕೆಳಗೆ ಕೂತು ಹಣೆ ಹಣೆ ಚಚ್ಚಿಕೊಂಡು ಗೋಳಾಡ ತೊಡಗುವನು.

ಅಷ್ಟರಲ್ಲಿ ಅಲ್ಲಿಗೆ ಬಂದ ಎಂಕಾಸಿನ ಇವನ ನಟನೆಯನ್ನು ನೋಡಿ ಬಹಳ ಸಂತೋಷದಿಂದ ಚಪ್ಪಾಳೆ ತಟ್ಟಿ ಭೇಷ್ ಭೇಷ್ ಎನ್ನುತ್ತಾ ಒಳಗೆ ಬರುವರು

ಮೇಷ್ಟು( ಸಹನೆಗೆಟ್ಟು) ಇವನೊಬ್ಬ ದೊಡ್ಡ ನಟ ನೀವೆಲ್ಲಾ ಅಭಿಮಾನಿಗಳು ಬೇರೆ. ಇನ್ನೊಂದ್ ಸಾರಿ ಯಾರಾದರೂ ಈ ಕಡೆ ತಲೆ ಹಾಕಿದ್ರೆ ಅವರೆಲ್ಲರೂ ಎನ್ನುತ್ತಾ ಓಡಿ ಹೋಗುವರು. ಮಾರೇಗೌಡ ಮಾತ್ರ ಅಲ್ಲೇ ನಿಂತುಕೊಂಡು ನೋಡುತ್ತಿರುತ್ತಾನೆ.

ಮೇಷ್ಟು- ಇವನ್ಯಾರಪ್ಪ ಕಮಂಗಿ ಹಿಂಗೆ ನಿಂತಿದ್ದಾನೆ (ಅವನನ್ನು ಹೊಡೆಯಲು ಹೋಗುವರು)

MG- ಮಿ also going going, you worring worring (ಎನ್ನುತ್ತಾ ಅವನು ಅವರ ಹಿಂದೆ ಓಡಿ ಹೋಗುವನು).

ಅರುಣಾ ರಾವ್

ಲೇಖಕರು

Chief Editor & Author

ವಿದ್ಯಾರ್ಥಿಗಳಿಗೆ ಸರಳ, ನಿಖರ ಹಾಗೂ ಉಪಯುಕ್ತ ಶೈಕ್ಷಣಿಕ ಮಾಹಿತಿ, ಭಾಷಣಗಳು ಮತ್ತು ವಿಜ್ಞಾನ ಮಾರ್ಗದರ್ಶನ ನೀಡುತ್ತಿರುವ ಮುಖ್ಯ ಸಂಪಾದಕರು.