ಚೈತ್ರದ ಜಾತ್ರೆ: ಉಗಾದಿ ಹಬ್ಬದ ಮಕ್ಕಳ ಕವನ | Jnana Kirana

Ugadi Village Fair – A Children’s Poem

ಮಕ್ಕಳ ಕಿರು ನಾಟಕಗಳು ಆಗಸ್ಟ್ 29, 2026 2 ನಿಮಿಷ ಓದು
ಚೈತ್ರದ ಜಾತ್ರೆ: ಉಗಾದಿ ಹಬ್ಬದ ಮಕ್ಕಳ ಕವನ | Jnana Kirana
ಸಾರಾಂಶ (Summary)

ಉಗಾದಿ ಹಬ್ಬ ಮತ್ತು ಚೈತ್ರದ ಜಾತ್ರೆಯ ಸುಂದರ ಅನುಭವವನ್ನು ವರ್ಣಿಸುವ ಅರುಣಾ ರಾವ್ ಅವರ 'ಚೈತ್ರದ ಜಾತ್ರೆ' ಮಕ್ಕಳ ಕವನ ಇಲ್ಲಿದೆ. ಮಕ್ಕಳ ಕವನಗಳನ್ನು ಓದಲು ಭೇಟಿ ನೀಡಿ.

ನವ ವಸಂತದ ತಂಗಾಳಿ

ಚಿಗುರು ಚಿಗುರಿನಲಿ ಮೈತಾಳಿ

ಹಚ್ಚಹಸಿರಿನ ಉಡುಪಿನಲಿ

ಬಂತದೊ ಚೈತ್ರ ಹುರುಪಿನಲಿ

ಭೂಮಿಗೆ ಕಳೆಯನು ನೀಡುತಲಿ

ಬೇವು ಬೆಲ್ಲವ ಸವಿಯುತಲಿ

ಮಾವಿನ ತೋರಣ ಬಾಗಿಲಲಿ

ರಂಗೋಲಿ ಸಿಂಗಾರ ಪರ್ವದಲಿ

ಪರಿಷೆಯ ಅಬ್ಬರ ಊರಿನಲಿ

ಸಡಗರ ಸಂಭ್ರಮ ಮನೆಗಳಲಿ

ತೇರನ್ನು ಎಳೆಯುವ ಬೀದಿಯಲಿ

ಮಿಂದೆವು ಭಕ್ತಿಯ ಹೊಳೆಯಲ್ಲಿ

ಆಟಿಕೆ ಅಂಗಡಿ ಸಾಲಿನಲಿ

ಕೊಂಡೆನು ಪೀಪಿಯ ಹರುಷದಲಿ

ಪೀಂ ಪೀಂ ಎನ್ನುವ ಸದ್ದಿನಲಿ

ಸೆಳೆದೆನು ಗಮನವ ಮುದ್ದಿನಲಿ

ಏರಿ ಕುಳಿತೆನು ರಾಟೆಯಲಿ

ತಿರುಗತೊಡಗಿತದು ಭರದಲ್ಲಿ

ತಲೆಯದು ಸುತ್ತಿತು ನಿಮಿಷದಲಿ

ಅರುಚತೊಡಗಿದೆನು ದಿಗಿಲಿನಲಿ

ರಾಟೆಯಿಂದ ಕೆಳಗಿಳಿಯುತಲಿ

ನಮಿಸಿದೆ ದೇವರ ಮನಸ್ಸಿನಲಿ

ಪ್ರಾಣವು ದಕ್ಕಿದ ಖುಷಿಯಲ್ಲಿ

ಓಡಿದೆ ಮನೆ ಕಡೆ ವೇಗದಲಿ

ಅರುಣಾ ರಾವ್

ಬೆಂಗಳೂರು

ಅರುಣಾ ರಾವ್

ಲೇಖಕರು

Chief Editor & Author

ವಿದ್ಯಾರ್ಥಿಗಳಿಗೆ ಸರಳ, ನಿಖರ ಹಾಗೂ ಉಪಯುಕ್ತ ಶೈಕ್ಷಣಿಕ ಮಾಹಿತಿ, ಭಾಷಣಗಳು ಮತ್ತು ವಿಜ್ಞಾನ ಮಾರ್ಗದರ್ಶನ ನೀಡುತ್ತಿರುವ ಮುಖ್ಯ ಸಂಪಾದಕರು.