ಮರಳಿ ಬಾರೆಲೇ ಯುಗಾದಿ
ಇಡೀ ಜಗತ್ತಿಗೆ ಜಗತ್ತೇ ಜನವರಿ ಒಂದನೇ ತಾರೀಖಿನಂದು ಹೊಸ ವರ್ಷವನ್ನು ಸಂಭ್ರಮ, ಸಡಗರಗಳಿಂದ ಆಚರಿಸಿದರೂ ಹಿಂದೂಗಳಿಗೆ ಮಾತ್ರ ನಿಜವಾದ ಅರ್ಥದಲ್ಲಿ ಹೊಸ ವರ್ಷ ಪ್ರಾರಂಭವಾಗುವುದು ಚೈತ್ರ ಶುದ್ಧ ಪಾಡ್ಯಮಿಯಂದು. ಅಂದು ಯುಗಾದಿ. 'ಯುಗದ ಆದಿ' ಈ ಹೆಸರೇ ಎಷ್ಟೊಂದು ಅರ್ಥಪೂರ್ಣವಲ್ಲವೇ! ಈ ಹಬ್ಬ ತನ್ನೊಡನೆ ಸಂಭ್ರಮ, ಸಡಗರಗಳ ಜೊತೆಗೆ ಬೇಸಿಗೆ ರಜೆಯನ್ನೂ ಕರೆತರುವುದರಿಂದ ಚಿಕ್ಕವರಾಗಿದ್ದ ನಮ್ಮ ಪಾಲಿಗಂತೂ ಕಾಮಧೇನು, ಕಲ್ಪವೃಕ್ಷವೇ ಆಗಿತ್ತು. ವಾರ್ಷಿಕ ಪರೀಕ್ಷೆಯ ಒತ್ತಡ ಕಳೆದು, 'ಉಸ್ಸಪ್ಪ' ಎಂದು ನಿರಾಳವಾಗುವಷ್ಟರಲ್ಲಿ ಯುಗಾದಿಯು ಮನೆಮನೆಗಳಿಗೆ ಧಾವಿಸಿ ಬರುತ್ತದೆ.
ರಜೆಯ ಸಂತಸದ ಜೊತೆಗೆ ಹಬ್ಬದ ಸಂಭ್ರಮವೂ ಸೇರಿ ಯುಗಾದಿ ನನ್ನ ಫೇವರೇಟ್ ಹಬ್ಬಗಳಲ್ಲಿ ಮೊದಲನೆಯ ಸ್ಥಾನ ಗಳಿಸಿದೆ. ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡಿದ್ದ ನಮ್ಮ ಪಾಲಿಗೆ ತಂದೆ-ತಾಯಿಗಳೆರಡೂ ಆಗಿದ್ದ ನನ್ನಮ್ಮ ಊದುಬತ್ತಿ ಹೊಸೆದು, ನಮ್ಮ ಹೊಟ್ಟೆ ತುಂಬಿಸಲು ಹೆಣಗಾಡುತ್ತಿದ್ದಳು. ಇಂತಹ ಪರಿಸ್ಥಿತಿಯಲ್ಲೂ ಯುಗಾದಿ ಹಬ್ಬಕ್ಕೆ ಮಾತ್ರ ಸಾಲ-ಸೋಲ ಮಾಡಿಯಾದರೂ ಹೊಸ ಉಡುಪುಗಳನ್ನು ಕೊಡಿಸದೆ ಇರುತ್ತಿರಲಿಲ್ಲ.
ಅವಳ ಪ್ರಕಾರ " ಯುಗಾದಿ ದೊಡ್ಡ ಹಬ್ಬ." ಹಬ್ಬಕ್ಕೆ ಒಂದು ವಾರವಿರುವಾಗಲೇ ನಮ್ಮನ್ನೆಲ್ಲ ಬಿಎಂಟಿಸಿ ಬಸ್ಸಿನಲ್ಲಿ ಅಟ್ಟಿಕೊಂಡು, ಮೆಜೆಸ್ಟಿಕ್ ಗೆ ಕರೆದೊಯ್ಯುತ್ತಿದ್ದಳು. ಮೆಜೆಸ್ಟಿಕ್ ಬೆಂಗಳೂರಿನ ಕೇಂದ್ರ ಭಾಗ. ನಗರದ ಮೂಲೆಮೂಲೆಗಳಿಂದ ಬಸ್ಸುಗಳು ಬರುವುದಲ್ಲದೆ, ರಾಜ್ಯ ಮತ್ತು ಹೊರ ರಾಜ್ಯಗಳಿಂದಲೂ ಬಸ್ಸುಗಳು ಇಲ್ಲಿಗೆ ಬಂದು ಸೇರುತ್ತವೆ. ರೈಲು ನಿಲ್ದಾಣವೂ ಸಹ ಇಲ್ಲಿಯೇ ಇರುವುದರಿಂದ ಸದಾ ಗಿಜಿಗಿಜಿಗುಟ್ಟುವ ಜನಸಾಗರ. ಧಾವಂತವಾಗಿ ಸಾಗುವ ಜನಗಳು, ತರಾವರಿ ಅಂಗಡಿಗಳು, ರಸ್ತೆಬದಿಯ ವ್ಯಾಪಾರಿಗಳು, ರಸ್ತೆಯ ಮಧ್ಯದಲ್ಲಿಯೇ ನಿಂತು ಕೈಗಳಲ್ಲಿ ಪೆನ್ನು, ಆಟಿಕೆಗಳನ್ನು ಹಿಡಿದು ಮಾರಾಟ ಮಾಡುವ ಸಣ್ಣ ವ್ಯಾಪಾರಿಗಳು, ಹರಿದ ಗೋಣೀಚೀಲದ ಮೇಲೆ ಕುಳಿತ ಭಿಕ್ಷುಕರು ಸಾವಿರಾರು ವಾಹನಗಳು ಸರ್ವೇ ಸಾಮಾನ್ಯ. ಬಸ್ಸಿನಿಂದಿಳಿದು ಈ ಜನ ಸಾಗರವನ್ನೂ, ವಾಹನಾಬ್ಧಿಯನ್ನೂ ಹಾಗೂ ಹೀಗೂ ಈಜಿಕೊಂಡು ಕೆಂಪೇಗೌಡ ರಸ್ತೆಗೆ ಹೋಗುವುದರೊಳಗೆ ಒಂದಷ್ಟು ಜನರಿಗಾದರೂ ಢಿಕ್ಕಿ ಹೊಡೆಯುವುದು ಖಚಿತವಾಗಿರುತ್ತಿತ್ತು. "ಮೂರೂ ಜನ ನನ್ನ ಹಿಂದೇನೇ ಬನ್ನಿ, ಕೈ ಹಿಡಿದು ಕೊಂಡೇ ಇರಿ" ಎಂಬ ಅಮ್ಮನ ತಾಕೀತಿನಂತೆ ಅವಳ ಹಿಂದೆ ಹಿಂದೆಯೇ ಸಾಗುತ್ತಿದ್ದೆವಾದರೂ ಕೆಲವೊಮ್ಮೆ ರಸ್ತೆಯ ಬದಿಯಲ್ಲಿನ ಅಂಗಡಿಗಳ ಮುಂದೆ ತೂಗು ಹಾಕಿರುತ್ತಿದ್ದ ವೆರೈಟಿ ವೆರೈಟಿ ಉಡುಪುಗಳನ್ನು ಕಣ್ಣರಳಿಸಿಕೊಂಡು, ಬಾಯಿ ಬಿಟ್ಟುಕೊಂಡು ನೋಡುತ್ತಾ ನಿಂತುಕೊಳ್ಳುತ್ತಿದ್ದ ನನ್ನನ್ನು ಜನಜಂಗುಳಿಯಲ್ಲಿ ಎಲ್ಲಿ ಕಳೆದು ಹೋಗುತ್ತಾಳೋ ಎಂಬ ಆತಂಕದಿಂದ ಕೆನ್ನೆ ಹಿಂಡಿಯೋ ಒಂದೇಟು ಕೊಟ್ಟೋ, ಕೈ ಹಿಡಿದು ಎಳೆದೊಯ್ಯುತ್ತಿದ್ದಳು. ಸಾಲು ಸಾಲಾಗಿದ್ದ ಅಂಗಡಿಗಳಲ್ಲೊಂದನ್ನು ಹೊಕ್ಕು, ಬಟ್ಟೆಗಳನ್ನು ತೆಗೆಸಿ, ನೋಡಿ, ಬೆಲೆ ಜಾಸ್ತಿ ಎಂದಂದುಕೊಂಡು ಮುಂದಿನ ಅಂಗಡಿಗೆ ತೆರಳುತ್ತಿದ್ದಳು. ನಾವು ಮೂವರೂ ಅವಳ ಬಾಲಂಗೋಸಿ.
ಹೀಗೆ ನಾಲ್ಕಾರು ಅಂಗಡಿಗಳಿಗೆ ಅಲೆದು, ಕೊನೆಗೊಮ್ಮೆ ತನ್ನ ಬಜೆಟ್ಟಿಗೆ ಸರಿಹೋಗುವ ಉಡುಪನ್ನು ಆರಿಸಿದರೆ ಅವಳ ಆಯ್ಕೆಯೇ ಫೈನಲ್. ಏಕೆಂದರೆ ಉಡುಪಿನ ಬಣ್ಣ, ಅದರ ಅಂದ ಚಂದಕ್ಕಿಂತಲೂ ಬಟ್ಟೆ ದೀರ್ಘಕಾಲ ಬಾಳಿಕೆ ಬರುತ್ತದೆಯೇ? ಎಂಬುದು ಅವಳ ಆಯ್ಕೆಯ ಅಲ್ಟಿಮೇಟ್ ಕ್ರೈಟೀರಿಯ. ಬಟ್ಟೆಯನ್ನು ಹಿಂಜಿ ಹಿಂಜಿ ಪರೀಕ್ಷಿಸಿ, ಕನಿಷ್ಠ ಐದಾರು ವರ್ಷಗಳಾದರೂ ಹರಿದುಹೋಗುವುದಿಲ್ಲವೆಂದು ಖಾತ್ರಿಯಾದ ಬಳಿಕವೇ ಖರೀದಿಸಲು ಮುಂದಾಗುತ್ತಿದ್ದಳು. ಇದರ ಜೊತೆಗೆ ನಮಗೆ ಮತ್ತೊಂದು ಪೀಕಲಾಟವಿತ್ತು. "ಬೆಳೆಯುವ ಮಕ್ಕಳಿಗೆ ಅವರ ಅಳತೆಗೆ ಸರಿಯಾದ ಉಡುಪುಗಳನ್ನು ಕೊಂಡರೆ, ಎರಡೇ ಎರಡು ದಿನಕ್ಕೇ ಚಿಕ್ಕದಾಗಿ ಹೋಗುತ್ತದೆ" ಎನ್ನುವುದು ಅವಳ ಸಿದ್ಧಾಂತವಾದುದರಿಂದ ನಮ್ಮಳತೆಗಿಂತಲೂ ಬಲು ದೊಡ್ಡ ಸೈಜಿನ ಬಟ್ಟೆಯನ್ನೇ ಖರೀದಿಸುತ್ತಿದ್ದಳು. ಆ ದೊಗಲೆ ದೊಗಲೆ ಬಟ್ಟೆಗಳಲ್ಲಿ ನಾವು ಬಫೂನುಗಳಂತೆ ಕಾಣುತ್ತೇವೆಂದು ತಿಳಿದಿದ್ದರೂ ಬಾಯಿ ಬಿಟ್ಟು ಹೇಳುವ ಧೈರ್ಯ, ಹಠ ಮಾಡುವ ಸ್ವಾತಂತ್ರ್ಯ ನಮಗಾರಿಗೂ ಇರಲಿಲ್ಲ. ನಮ್ಮ ಅಭಿಪ್ರಾಯವನ್ನು ಕೇಳುವವರಾರು? ಅಂತೂ ಹೊಸ ಬಟ್ಟೆಗಳು ಸಿಕ್ಕ ಸಂಭ್ರಮದಲ್ಲಿ 'ದೊಗಲೆಯುಡುಪು' ಎಂಬ ವಿಷಯ ಗೌಣವಾಗುತ್ತಿತ್ತು. ಆ ಬಟ್ಟೆಗಳ ಬ್ಯಾಗುಗಳನ್ನು ಹಿಡಿದು ಮಣ ಆಯಾಸವನ್ನೊತ್ತುಕೊಂಡು ರಾತ್ರಿ ಮನೆಗೆ ಹಿಂತಿರುಗುವಾಗ ಸಾವಿರ ಯುದ್ಧಗಳನ್ನು ಗೆದ್ದ ವಿಜಯೋತ್ಸಾಹ ನಮ್ಮ ಮುಖದ ಮೇಲೆ ರಾರಾಜಿಸುತ್ತಿತ್ತು. ಎಂದಿಗೆ ಹಬ್ಬದ ದಿನ ಬಂದೀತೋ, ಎಂದಿಗೆ ಈ ಹೊಸ ಉಡುಪನ್ನು ಧರಿಸೇನೋ......." ಎಂಬ ಕನವರಿಕೆ ಸದಾ ನನ್ನನ್ನಾವರಿಸಿರುತ್ತಿತ್ತು.
ಹಬ್ಬದ ದಿನ ಬೆಳಗ್ಗೆ ಕಣ್ಣು ಬಿಡುವುದಕ್ಕಿಂತ ಮುಂಚೆಯೇ ಯಾರದೋ ಮನೆಯ ರೇಡಿಯೋದಿಂದ "ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ" ಎಂಬ ಹಾಡು ತೇಲಿ ಬರುತ್ತಿತ್ತು. ಆ ಹಾಡಿಗೂ ಯುಗಾದಿ ಹಬ್ಬಕ್ಕೂ ಅವಿನಾಭಾವ ಸಂಬಂಧ ಹೇಗಿತ್ತೆಂದರೆ ಆ ಹಾಡಿಲ್ಲದೆ ಯುಗಾದಿ ಹಬ್ಬವೇ ಇಲ್ಲವೇನೋ ಎಂಬಂತೆ. ಬೇಗಬೇಗ ಎದ್ದು ಹಾಸಿಗೆಗಳನ್ನು ಸುತ್ತಿ, ಮಂಚದ ಕೆಳಗೆ ತುರುಕುವಷ್ಟರಲ್ಲಿ ಅಮ್ಮ ಕಾಫಿ ನೀಡುತ್ತಿದ್ದಳು.ಹಬ್ಬದ ದಿನ ಎಲ್ಲರಿಗೂ 'ಎಣ್ಣೆ ಸ್ನಾನ' ಕಡ್ಡಾಯವಾದುದರಿಂದ ಹಿಂದಿನ ದಿನವೇ ದೂರದ ಬೋರ್ವೆಲ್ನಿಂದ ಹೊತ್ತು ತಂದು ನೀರನ್ನು ತೊಟ್ಟಿಗೆ ತುಂಬಿಸಿರುತ್ತಿದ್ದೆವು. ನಾವೆಲ್ಲರೂ ಏಳುವುದಕ್ಕೆ ಮುಂಚೆಯೇ ಅಮ್ಮಮನೆಯ ಮುಂಬದಿಯಲ್ಲಿದ್ದ ಜಾಗದಲ್ಲಿ ಮೂರು ಕಲ್ಲುಗಳನ್ನಿಟ್ಡು ಮಾಡಿದ್ದ ಒಲೆಯ ಮೇಲೆ ದೊಡ್ಡ ಅಲ್ಯೂಮೀನಿಯಂ ಪಾತ್ರೆಯಲ್ಲಿ ಮರಳುವಂತೆ ನೀರು ಕಾಯಿಸಿರುತ್ತಿದ್ದಳು. ಉದ್ದನೆಯ ದಟ್ಟವಾದ ನನ್ನ ಕೂದಲನ್ನು ಉಜ್ಜಿ ತಲೆ ಸ್ನಾನ ಮಾಡಿಸುವಷ್ಟರಲ್ಲಿ ಅಮ್ಮನ ಸೊಂಟ ಬಿದ್ದು ಹೋಗುತ್ತಿತ್ತು. ಅಪರೂಪಕ್ಕೆ ಎಣ್ಣೆ ಸ್ನಾನ ಮಾಡಿ, ಮಿರಿ ಮಿರಿ ಮಿಂಚುತ್ತಿರುವ ಕೂದಲನ್ನು ಮೃದುವಾಗಿ ನೇವರಿಸುವುದೇ ಒಂದು ಖುಷಿ. ಯಾವುದ್ಯಾವುದೋ ಬೋರ್ವೆಲ್ ನೀರನ್ನು ತಂದು ವಾರಕ್ಕೊಮ್ಮೆಯೋ, ಹತ್ತು ದಿನಗಳಿಗೊಮ್ಮೆಯೋ ತಲೆ ಸ್ನಾನ ಮಾಡಿದರೂ ಒಂದೇ ಒಂದು ಕೂದಲೂ ಸಹ ಉದುರುತ್ತಿರಲಿಲ್ಲ! ಈಗ ದಿನಬಿಟ್ಟು ದಿನ ತಲೆ ಸ್ನಾನ, ಪ್ರೋಟೀನ್ಭರಿತ ಆಹಾರ ಸೇವನೆ, ಗಡುಸಲ್ಲದ ನೀರನ್ನೇ ಸ್ನಾನಕ್ಕೆ ಬಳಸಿದರೂ ಕೊತ್ತಂಬರಿ ಕಟ್ಟಿನಂತಿರುವ ಜುಟ್ಡನ್ನು ಕಂಡಾಗ ಅಮ್ಮನ ಕೈಗಳ ಜಾದೂ ಏನಿರಬಹುದೆಂದು ಆಲೋಚಿಸುವಂತಾಗುತ್ತದೆ. ಎಲ್ಲರ ಸ್ನಾನಗಳೂ ಮುಗಿದ ಮೇಲೆ ದೇವರ ಮನೆಯಲ್ಲಿ ಹೊಸ ಬಟ್ಟೆಗಳಿಗೆ ಅರಿಶಿನದ ಬೊಟ್ಟನಿಟ್ಟು, "ಮಕ್ಕಳಿಗೆ ಆಯಸ್ಸು ಆರೋಗ್ಯ ಕೊಡು ದೇವರೇ...." ಎಂದು ಪ್ರಾರ್ಥಿಸಿ, ನೀಡಿದ ಮೇಲೆ ಅದನ್ನು ಧರಿಸಿ ಖುಷಿಪಡುತ್ತಿದ್ದೆವು. ಹಂಚಿ ಕಡ್ಡಿಯಷ್ಟು ಸಣ್ಣಗಿದ್ದ ನಾನಂತೂ ಆ ಬಟ್ಟೆಯೊಳಗೆ ತೂರಿ ಹೋಗಿದ್ದರೂ ಹೊಸ ಬಟ್ಟೆ ಧರಿಸಿರುವುದರಿಂದ ನನ್ನಷ್ಟು ಸುಂದರಿ ಇನ್ನಾರು ಇಲ್ಲವೆಂದು ಬೀಗುತ್ತಿದ್ದೆ.
ಮನೆಯ ಮುಂಭಾಗಿಲಿಗೆ, ದೇವರ ಕೋಣೆಗೆ ಮಾವಿನ ತಳಿರು ತೋರಣದ ಜೊತೆಗೆ ಬೇವಿನ ಸೊಪ್ಪಿನ ದೊಡ್ಡ ದೊಡ್ಡ ಗೊಂಚಲುಗಳು ಸೆಕ್ಕಿರುತ್ತಿತ್ತು. ಮನೆಯ ಮುಂದುಗಡೆ ಅಮ್ಮ ಸಗಣಿಯಿಂದ ಸಾರಿಸಿಕೊಟ್ಟ ಜಾಗದಲ್ಲಿ ನಾನೂ ಮತ್ತು ನನ್ನಕ್ಕ ಪೈಪೋಟಿಯ ಮೇಲೆ ದೊಡ್ಡ ದೊಡ್ಡ ರಂಗೋಲಿಗಳನ್ನು ಬಿಡಿಸುತ್ತಿದ್ದೆವು. ಅದರ ಕೆಳಗೆ "ಹ್ಯಾಪಿ ಯುಗಾದಿ" ಎಂದು ಬರೆಯಲಾಗುತ್ತಿತ್ತು. ದೇವರ ಪೂಜೆ, ಮಂಗಳಾರತಿ ಮುಗಿದ ನಂತರ,
"ಶತಾಯುರ್ ವಜ್ರ ದೇಹಾಯ
ಸರ್ವ ಸಂಪತ್ ಕರಾಯಚ
ಸರ್ವಾರಿಷ್ಟ ವಿನಾಶಾಯ
ನಿಂಬಕಂ ದಳ ಭಕ್ಷಣಂ||"
ಶ್ಲೋಕವನ್ನು ನಮಗೆ ಹೇಳಿಕೊಟ್ಟು, ಬೇವು- ಬೆಲ್ಲವನ್ನು ಹಂಚುತ್ತಿದ್ದಳು. ಪ್ರಸಾದವನ್ನು ಕೈಯೊಡ್ಡಿ ತೆಗೆದುಕೊಂಡು ಭಕ್ತಿಯಿಂದ ಕಣ್ಣಿಗೆ ಹೊತ್ತುಕೊಂಡು ಗಂಭೀರವಾಗಿ ಶ್ಲೋಕವನ್ನು ಹೇಳುತ್ತಲೇ ಅವಳಿಗೆ ಕಾಣದಂತೆ ಬೇವನ್ನು ಪಕ್ಕಕ್ಕೆಸೆದು, ಬೆಲ್ಲವನ್ನು ಮಾತ್ರ ಬಾಯಿಗೆ ಹಾಕಿಕೊಂಡದ್ದು ಅದಾವ ಮಾಯದಲ್ಲೋ ತಮ್ಮನ ಕಣ್ಣಿಗೆ ಬಿದ್ದು, ಅಮ್ಮನ ಕಿವಿಗೆ ಮುಟ್ಟುವುದು ತಡವಾಗುತ್ತಿರಲಿಲ್ಲ. ಅಮ್ಮ ಗುರುಗುಟ್ಟಿಕೊಂಡು ನೋಡಿ,ಬೇವಿನ ಎಲೆಯಲ್ಲಿ ಎಷ್ಟೆಲ್ಲಾ ಒಳ್ಳೆಯ ಗುಣಗಳಿವೆ ಎಂಬುದರ ಬಗ್ಗೆ ಸಣ್ಣ ಉಪನ್ಯಾಸವನ್ನೇ ಕೊಟ್ಟು, ತನ್ನೆದುರಿಗೇ ಅದನ್ನು ಜಗಿದು ತಿನ್ನುವವರೆಗೂ ಬಿಡುತ್ತಿರಲಿಲ್ಲ. ಬೇವಿನಷ್ಟೇ ಕಹಿ ಮುಖವನ್ನು ಮಾಡಿಕೊಂಡು ಒಲ್ಲದ ಮನಸ್ಸಿನಿಂದಲೇ ಅದನ್ನು ಅರೆಬರೆ ಜಗಿದು ನುಂಗಿ, ತಕ್ಷಣ ಅಡುಗೆ ಮನೆಗೆ ಓಡಿ ಹೋಗಿ, ಒಂದು ಚಮಚ ಸಕ್ಕರೆಯನ್ನು ಬಾಯಿಗೆ ಸುರಿದುಕೊಳ್ಳುತ್ತಿದ್ದೆ. ನನ್ನಕ್ಕ ಕೂಡ ನನ್ನಂತೆಯೇ ಬೇವಿನ ಸೊಪ್ಪು ಎಸೆದಿದ್ದರೂ ಯಾವತ್ತಿಗೂ ಸಿಕ್ಕಿಹಾಕಿಕೊಂಡಿಲ್ಲ. ಈಗಲೂ ಸಹ ಅಮ್ಮನಿಂದ ಜಾಸ್ತಿ ಲೆಕ್ಚರ್ ಕೇಳುವ ಪಾತ್ರ ನನ್ನದೇ! ಹೊಸ ಬಟ್ಟೆ ಧರಿಸುವ ಖುಷಿಯ ಮುಂದೆ ಬೇವಿನ ಎಲೆಯ ಕಹಿಯೂ ಗೌಣವಾಗಿಬಿಡುತ್ತಿತ್ತು.
ಯುಗಾದಿ ನಮ್ಮ ಪಾಲಿಗೆ ಬಹಳ ದೊಡ್ಡ ಹಬ್ಬವೇ ಸರಿ. ಪ್ರತಿನಿತ್ಯ ರೇಷನ್ ಡಿಪೋನಲ್ಲಿ ತಂದ ದಪ್ಪಕ್ಕಿಯ ಅನ್ನವೋ, ಗಂಜಿಯೋ, ಇಲ್ಲದಿದ್ದರೆ ರಾಗಿ ಮುದ್ದೆಯೋ ತಿನ್ನುತ್ತಿದ್ದ ನಮಗೆ, ಆ ದಿನ ಹಬ್ಬದ ಊಟ. ಪಲ್ಯಗಳು ಕೋಸಂಬರಿಗಳು, ಪಾಯಸ, ಚಿತ್ರಾನ್ನ, ತವ್ವೆ, ಹಪ್ಪಳ ಸಂಡಿಗೆಗಳು. ಬೇಳೆ ಹೋಳಿಗೆಯ ಜೊತೆಗೆ ನನ್ನ ಫೇವರಿಟ್ ಒಬ್ಬಟ್ಟಿನ ಸಾರು ಕೂಡ ಇರುತ್ತಿತ್ತು. "ಒಬ್ಬಟ್ಟಿಗೆಂದು ಬೇಯಿಸಿದ ಬೇಳೆಯ ನೀರನ್ನು ಬಸಿದು ಸಾರು ಮಾಡುವುದರಿಂದ ಅದಕ್ಕೆ ಒಬ್ಬಟ್ಡಿನ ಸಾರೆಂದು ಹೆಸರು." ಇದಕ್ಕೆ ಹುಳಿ ಸ್ವಲ್ಪ ಮುಂದಿರುವುದಷ್ಟೇ ಅಲ್ಲದೆ, ಅಲ್ಪ ಪ್ರಮಾಣದಲ್ಲಿ ಬೆಲ್ಲವನ್ನೂ ಸೇರಿಸಿರುವುದರಿಂದ ರುಚಿ ಬ್ರಹ್ಮಾಂಡವಾಗಿರುತ್ತದೆ. ಊಟ ಮಾಡುವವರಿಗೆ ಎರಡು ಬಾಯಾಗುತ್ತದೆಂದರೂ ತಪ್ಪಿಲ್ಲ. ಚೆನ್ನಾಗಿ ತೊಳೆದ ಬಾಳೆ ಎಲೆಯಲ್ಲಿ ಎಲ್ಲ ಪದಾರ್ಥಗಳನ್ನೂ ಕ್ರಮವಾಗಿ ಬಡಿಸಿ, ತುಪ್ಪದ ಅಬಗಾರ ಆದ ಮೇಲೆ ಊಟದ ಪ್ರಾರಂಭ. ಊಟ ಬಡಿಸುವಾಗ, "ಇದು ನಮ್ಮ ಪಾಲಿಗೆ ಬಹಳ ದೊಡ್ಡ ಹಬ್ಬ. ಈ ವರ್ಷ ಯುಗಾದಿಯನ್ನು ಕಂಡವರು ಮುಂದಿನ ವರ್ಷ ಕಾಣುವರೋ ಇಲ್ಲವೋ ಹೋದ ವರ್ಷದ ಎಲ್ಲಾ ನೋವು ದುಃಖ, ಕಷ್ಟಗಳು ಕಳೆದು ಈ ವರ್ಷವಾದರೂ ಸುಖ, ಶಾಂತಿ ಸಿಗಲಿ ಅಂತ ಈ ಹಬ್ಬವನ್ನು ಆಚರಿಸೋದು. ಹೊಸ ಬಟ್ಟೆ ಕೊಳ್ಳಲು ದುಡ್ಡಿಲ್ಲದಿದ್ದರೆ ಒಂದು ಬನಿಯನ್ ಕನಿಷ್ಠ ಪಕ್ಷ ಒಂದು ಟವಲ್ಲಾದರೂ ಪರವಾಗಿಲ್ಲ, ಹೊಸ ಬಟ್ಟೆ ಹಾಕಿಕೊಳ್ಳಲೇಬೇಕು, ಎಷ್ಟೇ ಬಡತನವಿದ್ದರೂ ಹಬ್ಬದ ಅಡುಗೆಯನ್ನು ಮಾಡಲೇಬೇಕು. ಈ ದಿನ ಮಾಡಿದೆಲ್ಲವೂ ವರ್ಷಪೂರ ಪ್ರಭಾವ ಬೀರುತ್ತಂತೆ" ಎಂದು ಅಮ್ಮ ಪ್ರತೀವರ್ಷವೂ ತಪ್ಪದೇ ಹೇಳುತ್ತಿದ್ದಳು. ಈ ದಿನ ಏನು ಮಾಡುತ್ತಿದ್ದೆನೋ ಕಾಣೆ ಆದರೆ ಅಮ್ಮನ ಕೈಲಿ ಬೈಗುಳ, ಹೊಡೆತ ಮಾತ್ರ ತಿನ್ನದಿರುವಂತೆ ಜಾಗ್ರತೆ ವಹಿಸುತ್ತಿದ್ದೆ. ಆದರೂ ವರ್ಷಪೂರ್ತಿ ಒಂದಲ್ಲ ಒಂದು ಕಾರಣಕ್ಕೆ ಅದು ಸಿಕ್ಕೇ ಸಿಗುತ್ತಿದ್ದವಾದರೂ ಯುಗಾದಿಯ ಬಗೆಗಿನ ಶ್ರದ್ಧೆ ಒಂದಿಷ್ಟೂ ತಗ್ಗಿಲ್ಲ. ಏಕೆಂದರೆ ನಂಬಿಕೆ ಮತ್ತು ಕನಸುಗಳೇ ಜೀವನವಲ್ಲವೇ! ಈಗಲೂ ಪ್ರತಿ ವರ್ಷ ನಾನೂ ಯುಗಾದಿ ಹಬ್ಬಕ್ಕೆ ಹೊಸ ಉಡುಪುಗಳನ್ನು ಕೊಂಡು ತರುವ ಪದ್ಧತಿಯನ್ನು ಪಾಲಿಸಿಕೊಂಡು ಬಂದಿದ್ದೇನೆ. ( ಉಳಿದ ಹಬ್ಬಕ್ಕೂ ಕೊಳ್ಳುವುದು ತಪ್ಪಿಸಲ್ಲ ಎಂದಿಟ್ಟುಕೊಳ್ಳಿ)
ಮನೆಯಲ್ಲಿ ಗಂಡಸರಿಲ್ಲದಿದ್ದರೂ ಶಾಸ್ತ್ರಿಗಳ ವಂಶಸ್ಥರಾದುದರಿಂದಲೋ ಏನೋ ಪೈಸೆ ಪೈಸೆಗೂ ಕಷ್ಟ ಪಡುತ್ತಿದ್ದರೂ, ವಾಡಿಕೆಯಂತೆ 'ಒಂಟಿಕೊಪ್ಪಲ್ ಪಂಚಾಂಗ'ವನ್ನು ಯುಗಾದಿಗೆ ಕೊಂಡು ತರುತ್ತಿದ್ದಳು. ಹಬ್ಬದ ದಿನ ಸಂಜೆ ದೇವರ ದೀಪ ಹಚ್ಚಿದ ಮೇಲೆ ಮೂರು ಜನ ಮಕ್ಕಳನ್ನೂ ಕೂಡಿಸಿಕೊಂಡು, ರಾಶಿ ಫಲಗಳು ಆದಾಯ-ವ್ಯಯ, ಸಂಕ್ರಾಂತಿ ಪುರುಷನ ಆಕಾರದ ಜೊತೆಗೆ ಆರೋಗ್ಯ-ಅನಾರೋಗ್ಯಗಳನ್ನು ಓದಿ ಹೇಳುತ್ತಿದ್ದಳು. ನಾವೆಲ್ಲ ನಮ್ಮ ನಮ್ಮ ಪಾಲಿಗೆ ಎಷ್ಟೆಷ್ಟು ಲಾಭ ನಷ್ಟಗಳಿವೆ ಎಂಬುದನ್ನು ಆಸಕ್ತಿಯಿಂದ ಕೇಳುತ್ತಿದ್ದೆವು. ಮಕ್ಕಳಾಗಿದ್ದ ನಮಗೆ ಯಾವ ಆದಾಯವೂ ಇರಲಿಲ್ಲವಾದ್ದರಿಂದ ನಷ್ಟವೂ ಇಲ್ಲವಷ್ಟೆ. ಆದರೂ ಬಡತನದ ಬೇಗೆಯಲ್ಲಿ ಬೇಯುತ್ತಿದ್ದ ನಮಗೆ ಪಂಚಾಂಗದಲ್ಲಿಯಾದರೂ ಲಾಭದ ಸಂಖ್ಯೆಹೆಚ್ಚಾಗಿರುವುದನ್ನು ಕಂಡಾಗ ಸಂತೋಷವುಂಟಾಗುತ್ತಿತ್ತು. ನಮ್ಮ ಮೂವರಲ್ಲಿ ಯಾರಿಗಾದರೂ ಆದಾಯ ಕಡಿಮೆ ಬಂದಿದ್ದರೆ ಉಳಿದಿಬ್ಬರು ಅವರನ್ನು ಗೇಲಿ ಮಾಡಿ ನಗುತ್ತಿದ್ದೆವು. ಸಂಕ್ರಾಂತಿ ಪುರುಷನ ಆಕಾರವನ್ನು ಕೇಳಿ ಅದನ್ನು ಕಲ್ಪಿಸಿಕೊಂಡು ಹೆದರಿಕೊಂಡದ್ದೂ ಇದೆ.
ಹಬ್ಬದ ಮಾರನೆಯ ದಿನ 'ವರ್ಷದ ತೊಡಕು' ವರ್ಷದುದ್ದಕ್ಕೂ ಎದುರಾಗುವ ಸಂಕಷ್ಟಗಳನ್ನೂ ತೊಡಕುಗಳನ್ನೂ ಕಳೆದುಕೊಳ್ಳಲು ಆ ದಿನ 'ಮಾಂಸಾಹಾರ ಭಕ್ಷಣೆ' ಮಾಡಬೇಕೆನ್ನುವುದು ಇತರರ ರೂಢಿ. ನಾವು ವಾಸವಿದ್ದ ಏರಿಯಾದಲ್ಲಿ ನಮ್ಮನ್ನು ಬಿಟ್ಟು ಉಳಿದವರೆಲ್ಲರೂ ಮಾಂಸಾಹಾರಿಗಳೇ! ಚಿಕ್ಕಂದಿನಿಂದಲೂ ನನಗೆ ಅದರ ವಾಸನೆಯೇ ಸರಿ ಬೀಳದು. ನನ್ನಮ್ಮನಿಗೂ ಹಾಗೇ ಇತ್ತೇನೋ! ಆದ್ದರಿಂದ ಅಂದು ಬೆಳಗ್ಗೆ ತಿಂಡಿ ತಿಂದ ತಕ್ಷಣ ನಮ್ಮನ್ನೆಲ್ಲಾ ಹೊರಡಿಸಿಕೊಂಡು ಗಾಂಧಿನಗರದಲ್ಲಿರುವ 'ಅಣ್ಣಮ್ಮನ ದೇವಸ್ಥಾನಕ್ಕೆ' ಕರೆದೊಯ್ಯುತ್ತಿದ್ದಳು. ಅಣ್ಣಮ್ಮ ಬೆಂಗಳೂರಿನ ಗ್ರಾಮ ದೇವತೆ. ಗಾಂಧಿನಗರ ದ ಮುಖ್ಯ ರಸ್ತೆಯಲ್ಲಿ ಇರುವ ಈ ಗುಡಿಯ ಮುಂಭಾಗದಲ್ಲಿ 'ಬಿಸಿಲು ಮಾರಮ್ಮ'ನ ಚಿಕ್ಕ ಚಿಕ್ಕ ವಿಗ್ರಹಗಳಿವೆ. ಅದಕ್ಕೆ ಮೊಸರಿನ ಅಭಿಷೇಕವನ್ನು ಮಾಡಿದರೆ ಅಮ್ಮ ನಮ್ಮನ್ನು ತಂಪಾಗಿ ಕಾಪಾಡುತ್ತಾಳೆಂಬ ನಂಬಿಕೆಯಿರುವುದರಿಂದ ಭಕ್ತಾದಿಗಳೆಲ್ಲರೂ ಆ ವಿಗ್ರಹಗಳಿಗೆ ಮೊಸರಿನಿಂದ ಅಭಿಷೇಕವನ್ನು ಮಾಡುತ್ತಾರೆ.
ದೇವಾಲಯದ ಪ್ರಾಂಗಣದಲ್ಲಿ ಅಣ್ಣಮ್ಮನ ನಾಲ್ಕಾರು ಉತ್ಸವ ಮೂರ್ತಿಗಳಿರುತ್ತವೆ. ಸರತಿಯ ಸಾಲಿನಲ್ಲಿ ನಿಂತು, ಗರ್ಭ ಗುಡಿಯಲ್ಲಿರುವ ದೇವಿಯನ್ನು ದರ್ಶಿಸಿ, ತಂಬಿಟ್ಟಿನ ಆರತಿಯನ್ನು ಬೆಳಗಿ, ಮೊಸರನ್ನದ ನೈವೇದ್ಯವನ್ನು ಮಾಡುತ್ತಿದ್ದಳು. ಈ ಮೊಸರನ್ನವನ್ನು ಅಲ್ಲಿದ್ದ ಭಕ್ತಾದಿಗಳಿಗೆಲ್ಲಾ ಹಂಚಿ ನಾವೂ ತಿಂದ ಬಳಿಕ
ಕೆ.ಜಿ ರಸ್ತೆಯಲ್ಲಿ ಸಾಲು ಸಾಲಾಗಿರುವ ಚಿತ್ರ ಮಂದಿರಗಳಲ್ಲಿ ಯಾವುದಾದರೊಂದನ್ನು ಹೊಕ್ಕು ಕನ್ನಡ ಸಿನಿಮಾ ತೋರಿಸುತ್ತಿದ್ದಳು. ನಮ್ಮ ಮನೆಗೆ ಸ್ವಲ್ಪ ದೂರದಲ್ಲಿದ್ದ ಸಿನಿಮಾ ಟೆಂಟಿಗೆ ತಿಂಗಳಿಗೊಮ್ಮೆಯೋ ಎರಡು ತಿಂಗಳಿಗೊಮ್ಮೆಯೋ ಹೋಗುತ್ತಿದ್ದೆವಾದರೂ ಇಷ್ಟು ದೊಡ್ಡ ಥೀಯೇಟರಿನಲ್ಲಿ ಸಿನಿಮಾ ನೋಡುವ ಭಾಗ್ಯ ದೊರಕುತ್ತಿದ್ದದ್ದು ವರ್ಷಕ್ಕೊಂದೇ ಬಾರಿ. ನಂತರ ಜನತಾ ಹೋಟೆಲ್ಲಿನಲ್ಲಿ ಮಸಾಲೆ ದೋಸೆ, ಉದ್ದಿನ ವಡೆಗಳನ್ನು ಕೊಡಿಸುತ್ತಿದ್ದಳು. ಗರಿಗರಿಯಾದ ಮಸಾಲೆದೋಸೆ ಬಾಯಲ್ಲಿಟ್ಟರೆ ಕರಗಿಹೋಗುವಂತಿರುತ್ತಿತ್ತು. ಇಷ್ಟೆಲ್ಲಾ ಮುಗಿಯುವಷ್ಟರಲ್ಲಿ ಸೂರ್ಯ ಪಡುವಣ ದಿಕ್ಕಿನತ್ತ ಓಡತೊಡಗುತ್ತಿದ್ದ. ತುಂಬಿ ತುಳುಕುತ್ತಿದ್ದ ಬಸ್ಸಿನಲ್ಲಿ ಸೀಟು ಸಿಕ್ಕರೆ ಸಿಕ್ಕೀತು, ಇಲ್ಲದಿದ್ದರೆ ನಿಂತುಕೊಂಡೇ ಮನೆ ತಲುಪುವಷ್ಟರಲ್ಲಿ ಸಾಕು ಸಾಕಾಗಿ ಹೋಗುತ್ತಿತ್ತು.ರಾತ್ರಿ ಏನಾದರೂ ಸ್ವಲ್ಪ ಹೊಟ್ಟೆಗೆ ಹಾಕಿಕೊಂಡು ಮಲಗಿದಾಗ ಬೆಳಗ್ಗೆ ನೋಡಿದ್ದ ಸಿನಿಮಾ ಮತ್ತೊಮ್ಮೆ ತಲೆಯಲ್ಲಿ ನೈಟ್ ಶೋ ಓಡುತ್ತಿತ್ತು.
ಈಗ ನಮಗೇನು ಬೇಕಾದರೂ, ಬೇಕೆಂದಾಗ ಕೊಂಡುಕೊಳ್ಳುವ ಸಾಮರ್ಥ್ಯವಿದ್ದರೂ ಯುಗಾದಿ ಹಬ್ಬದ ಹಬ್ಬಕ್ಕೆಂದು ಅಮ್ಮ ಕೊಡಿಸುತ್ತಿದ್ದ ಹೊಸ ಬಟ್ಟೆಯ ನೆನಪಾಗುತ್ತದೆ. ಅವು ಬ್ರಾಂಡೆಡ್ ಅಲ್ಲದಿದ್ದರೂ, ದುಬಾರಿಯಾಗಿರದಿದ್ದರೂ, ಕೊನೆಗೆ ಸರಿಯಾದ ಫಿಟ್ಟಿಂಗ್ ಸಹ ಇಲ್ಲದಿದ್ದರೂ ಅಮ್ಮನ ಪ್ರೀತಿಯ ಫಿಟ್ಟಿಂಗಂತೂ ಇದ್ದೆ ಇರುತ್ತಿತ್ತು. ಈಗಲೂ ಯುಗಾದಿ ಹಬ್ಬದ ದಿನ "ಇದು ನಮ್ಮ ಪಾಲಿಗೆ ಬಹಳ ದೊಡ್ಡ ಹಬ್ಬ. ಈ ವರ್ಷ ಯುಗಾದಿಯನ್ನು ಕಂಡವರು ಮುಂದಿನ ವರ್ಷ ಕಾಣುವರೋ ಇಲ್ಲವೋ ಎಂಬ ಅಮ್ಮನ ಪೂರ್ತಿ ಡೈಲಾಗನ್ನು ನನ್ನ ಮಗಳಿಗೆ ಪ್ರತಿವರ್ಷ ಚಾಚೂ ತಪ್ಪದೆ ಹೇಳುತ್ತೇನೆ.
ಅರುಣಾ ರಾವ್