ಪ್ರಕೃತಿ ನಿಯಮ
ಕಾಗೆಯೊಂದು ಒಲವಿನಿಂದ ಇಟ್ಟಿರಲು ತತ್ತಿಯ
ಪಿಕವಾಗ ಮೋಸದಿಂದ ತಂದಿಟ್ಟಿತು ಮೊಟ್ಟೆಯ
ಮುಗ್ಧ ಕಾಗೆ ಅನುದಿನವು ನೀಡುತಿರಲು ಶಾಖವ
ತತ್ತಿಯೊಡೆದುದನ್ನು ಕಂಡು ಪಡುತಿರಲು ಹರುಷವ
ಕಾಳು ಹೆಕ್ಕಿ ಕೊಕ್ಕಿನಲ್ಲಿ ನೀಡುತಿರಲು ಗುಟುಕದು
ರೆಕ್ಕೆಪುಕ್ಕ ಮೂಡಿ ಬಂದ ಮರಿಗಳೇನು ಚೆಲುವದು
ಕಾಕಾ ಎಂದು ಹೇಳೆ ಬಾಯಿ ತೆರೆದ ಮರಿಗಳು
ಮೂರು ಕಾಕ ಒಂದು ಕುಹೂ ದನಿ ಕೇಳಿ ಬೆಚ್ಚಲು
ಮೋಸವರಿತ ಕಾಗೆ ತಾನು ಪಿಕವ ಕುಕ್ಕಿತು
ರೆಕ್ಕೆ ಪುಕ್ಕ ಬಲಿತ ಪಿಕ ಆಗಸಕೆ ಹಾರಿತು
ಕಾಗೆ ತನ್ನ ಪೆದ್ದತನಕೆ ನೊಂದು ಕೊಂಡಿತು
ಸೃಷ್ಟಿ ನಿಯಮವನ್ನು ತಾನು ಅರಿತುಕೊಂಡಿತು