ಮನಸೂರೆಗೊಳ್ಳುವ ಜರ್ಮನಿಯ ಕೂಕೂ ಗಡಿಯಾರ | ಪ್ರವಾಸಾನುಭವ

The Fascinating Cuckoo Clock of Germany | A Travel Experience

ಪ್ರಬಂಧ ಮತ್ತು ಪತ್ರ ಲೇಖನ ಆಗಸ್ಟ್ 30, 2026 3 ನಿಮಿಷ ಓದು
ಮನಸೂರೆಗೊಳ್ಳುವ ಜರ್ಮನಿಯ ಕೂಕೂ ಗಡಿಯಾರ | ಪ್ರವಾಸಾನುಭವ
ಸಾರಾಂಶ (Summary)

ಜರ್ಮನಿಯ ಬ್ಲ್ಯಾಕ್ ಫಾರೆಸ್ಟ್ ಪ್ರದೇಶದಲ್ಲಿರುವ ಪ್ರಸಿದ್ಧ ಕೂಕೂ ಗಡಿಯಾರದ ಪ್ರವಾಸಾನುಭವ, ಅದರ ಅದ್ಭುತ ವಿನ್ಯಾಸ, ಇತಿಹಾಸ ಮತ್ತು ಜರ್ಮನಿಯ ಸಮಯಪಾಲನೆಯ ಕುರಿತು ಲೇಖನ.

ಮನಸೂರೆಗೊಳ್ಳುವ ಜರ್ಮನಿಯ ಕೋಗಿಲೆ ಗಡಿಯಾರ ಯೂರೋಪಿನ ಪ್ರಸಿದ್ಧ ಪ್ರವಾಸಿ ಸ್ಥಳಗಳಲ್ಲಿ ಜರ್ಮನಿಯ ಬ್ಲ್ಯಾಕ್ ಫಾರೆಸ್ಟ್

ಪ್ರದೇಶದಲ್ಲಿರುವ ಕೂಕೂ ಗಡಿಯಾರವೂ ಒಂದು. ರೈನ್ ಜಲಪಾತದ ಸೌಂದರ್ಯವನ್ನು ಸವಿದು, ನದಿಯಲ್ಲಿ ದೋಣಿ ವಿಹಾರ ಮಾಡಿದ ಬಳಿಕ, ಟ್ರಿಬರ್ಗ್ ಸಮೀಪದ ಶೋನಾಕ್‌ಬಾಖ್‌ನಲ್ಲಿರುವ ವಿಶ್ವಪ್ರಸಿದ್ಧ ಕೂಕೂ ಗಡಿಯಾರವನ್ನು ನೋಡಲು ನಾವು ಹೊರಟೆವು.

ನಾವು ಅಲ್ಲಿಗೆ ತಲುಪುವ ವೇಳೆಗೆ ಸಂಜೆ ಸುಮಾರು 5:50 ಆಗಿತ್ತು. ಇನ್ನೇನು ಕೆಲವೇ ನಿಮಿಷಗಳಲ್ಲಿ ಗಡಿಯಾರದಲ್ಲಿದ್ದ ಬೃಹತ್ ಕೂಕೂ ಹೊರಬಂದು ಕೂಗಲಿತ್ತು. ಅದರ ಜೊತೆಗೆ ನರ್ತಿಸುವ ಜೋಡಿ ಗೊಂಬೆಗಳ ಪ್ರದರ್ಶನವನ್ನೂ ನೋಡಬೇಕೆಂಬ ಉತ್ಸಾಹದಿಂದ ನಾವೆಲ್ಲರೂ ಬಸ್ಸಿನಿಂದ ಬೇಗನೆ ಇಳಿದು ಗಡಿಯಾರದತ್ತ ಸಾಗತೊಡಗಿದೆವು.

ಆ ಹಾದಿಯ ಎಡಬಲಗಳಲ್ಲಿ ಕೂಕೂ ಗಡಿಯಾರಗಳನ್ನು ಮಾರುವ ಹಲವಾರು ಅಂಗಡಿಗಳಿರುವಂತೆಯೇ ಸಿದ್ಧ ಉಡುಪುಗಳ ಅಂಗಡಿಗಳೂ ಇದ್ದವು. ಅಂಗಡಿಯೊಂದರಲ್ಲಿ ಪ್ರದರ್ಶನಕ್ಕಿಟ್ಟಿದ್ದ ಸುಂದರ ಉಡುಪೊಂದು ನನ್ನನ್ನು ಬಹಳವಾಗಿ ಆಕರ್ಷಿಸಿತು. ಆದರೆ ಅದನ್ನು ಕೊಳ್ಳಲು ಸಮಯವಿರಲಿಲ್ಲವಾದ್ದರಿಂದ ವಾಪಸ್‌ ಬರುವಾಗ ಕೊಂಡರಾಯಿತೆಂದು ನಡಿಗೆಯನ್ನು ಮುಂದುವರಿಸಿದೆ ಮುಂದುವರಿಸಿದೆ.. ಓಡುತ್ತಲೇ ಗಡಿಯಾರವಿರುವ ಜಾಗವನ್ನು ತಲುಪಿದಾಗ ಆರು ಗಂಟೆಗೆ ಕೇವಲ ಎರಡು ನಿಮಿಷಗಳು ಮಾತ್ರ ಬಾಕಿ ಇದ್ದವು. ಆಯಾಸದಿಂದ ಏದುಸಿರು ಬಿಡುತ್ತಿದ್ದ ನಾವು ಕೂಕೂ ಕೂಗಲು ಆರಂಭಿಸುತ್ತಿದ್ದಂತೆ ಉಸಿರಾಡುವುದನ್ನೇ ಮರೆತು ಬೆರಗು ಕಣ್ಣುಗಳಿಂದ ವೀಕ್ಷಿಸತೊಡಗಿದೆವು.

ಈ ಬೃಹತ್ ಕೂಕೂ ಗಡಿಯಾರವನ್ನು ಎವಾಲ್ಡ್ ಎಬ್ಲೆ ಮತ್ತು ರಾಲ್ಫ್ ಎಬ್ಲೆ ಸಹೋದರರು ನಿರ್ಮಿಸಿದ್ದಾರೆಂದು ಅವರು ತಿಳಿಸಿದರು. ಗಡಿಯಾರದ ಯಂತ್ರಾಂಗದತೂಕ ಸುಮಾರು ಆರು ಟನ್‌ಗಳಷ್ಟಿದ್ದು, ಅದರ ಬೃಹತ್ ಚಕ್ರಗಳು ಮತ್ತು ಉದ್ದನೆಯ ಪೆಂಡುಲಂ ವೀಕ್ಷಕರಲ್ಲಿ ಆಶ್ಚರ್ಯ ಮೂಡಿಸುತ್ತವೆ ಮುಂತಾಗಿ ಪ್ರವಾಸೀ ಮಾರ್ಗದರ್ಶಕರು ಹೇಳುತ್ತಿದ್ದ ವಿವರಗಳಾವವೂ ನಮ್ಮ ಕಿವಿಗಳ ಮೇಲೆ ಬೀಳಲೇ ಇಲ್ಲ. ಎಲ್ಲರೂ ಉಸಿರು ಬಿಗಿ ಹಿಡಿದು ಆರು ಗಂಟೆಯಾಗುವುದನ್ನೇ ಕಾಯತೊಡಗಿದೆವು. ಗಂಟೆ ಆರಾಗುತ್ತಲೇ ಗೂಡಿನಿಂದ ಹೊರಬಂದ ಕೂಕೂ ಹಕ್ಕಿ ಕೆಲವು ಸೆಕೆಂಡುಗಳ ಕಾಲ ಕೂಗಿ ತನ್ನ ಸ್ವಸ್ಥಾನವನ್ನು ತಲುಪಿತು. ಅದರೊಂದಿಗೆ ನರ್ತಿಸುವ ಜೋಡಿ ಗೊಂಬೆಗಳೂ ಸಹ ಗೂಡಿನಿಂದ ಹೊರಬಂದು ಲಯಕ್ಕೆ ತಕ್ಕಂತೆ ನಿಧಾನ ಗತಿಯಲ್ಲಿ ನರ್ತಿಸಿ ನಮ್ಮನ್ನು ಕಿನ್ನರ ಲೋಕಕ್ಕೇ ಕರೆದೊಯ್ದವು. ಅದರ ನರ್ತನವನ್ನು ವೀಡಿಯೊ ಚಿತ್ರೀಕರಿಸಿ, ಒಂದಷ್ಟು ಫೋಟೋಗಳನ್ನು ಕ್ಲಿಕ್ಕಿಸಿಕೊಂಡು,ಆ ದೊಡ್ಡ ಗಡಿಯಾರದ ಒಳಹೊಕ್ಕು ಅದನ್ನು ತಯಾರಿಸಿರುವ ಕುಶಲತೆಯನ್ನು ಕಂಡು ಬೆರಗಾದೆವು. ೧೫ ಅಡಿ ಉದ್ದ, ೬ ಟನ್‌ ತೂಕವಿರುವ ಈ ಗಡಿಯಾರದ ಪೆಂಡಾಲಮ್ಮೇ ೨೬ ಅಡಿಗಳಷ್ಟು ಉದ್ದವಿತ್ತು. ಮೂವತ್ತು ನಿಮಿಷಗಳಿಗೊಮ್ಮೆ ಹೊರಬಂದು ಕೂಗುವ ಕೂಕೂ ಈಗ ತೆಪ್ಪಗೆ ಕುಳಿತಿತ್ತು. ೧೯೯೪ ರಲ್ಲಿ ಲೋಕಾರ್ಪಣೆಗೊಂಡು ೧೯೯೭ರಲ್ಲಿ ಗಿನ್ನೀಸ್‌ ದಾಖಲೆ ಪುಸ್ತಕವನ್ನು ಸೇರಿ ಕೂಕೂ ಗಡಿಯಾರದ ಮಾದರಿಯೊಂದನ್ನು ಕೊಳ್ಳಲು ಅಂಗಡಿಯನ್ನು ಪ್ರವೇಶಿಸಿದ ನನಗೆ ಅದರ ಬೆಲೆಗಳೂ ಸಹ ಗಿನ್ನೀಸ್‌ ದಾಖಲೆಯನ್ನೇ ಬರೆಯುವಂತಿವೆಯೇನೋ ಎನ್ನಿಸಿತು! ಸುಮಾರು ಅರ್ಧ ಗಂಟೆಗೂ ಮೀರಿ ವಿವಿಧ ಮಾದರಿಯ ಕೂಕೂ ಗಡಿಯಾರಗಳನ್ನು ನೋಡಿ, ಪ್ರಶಂಸಿಸಿ, ಕೊನೆಗೆ ೫ ಯೂರೋಗಳನ್ನು ನೀಡಿ ಕೂಕೂ ಗಡಿಯಾರದ ಕೀ ಚೈನನ್ನು ಕೊಂಡು ಸಮಾಧಾನ ಪಟ್ಟುಕೊಂಡೆನು.

ಅಲ್ಲಿಂದ ವಾಪಸ್‌ ಬಸ್ಸಿನತ್ತ ಹಿಂದಿರುಗುತ್ತಿರುವಾಗ ನನ್ನನ್ನು ಬಹಳವಾಗಿ ಆಕರ್ಷಿಸಿದ್ದ ಉಡುಪನ್ನು ನನ್ನ ಮಗಳಿಗಾಗಿ ಕೊಳ್ಳೋಣವೆಂದು ಆ ಅಂಗಡಿಗೆ ಹೋದೆನು. ಏನಾಶ್ಚರ್ಯ! ಅಂಗಡಿಯ ಮಾಲೀಕ ಅಂಗಡಿಯನ್ನು ಮುಚ್ಚಲು ಸನ್ನದ್ಧನಾಗುತ್ತಿದ್ದನು. ಆಗಿನ್ನೂ ಆರೂವರೆಯಷ್ಟೆ. ನಾನು ಒಳಗೆ ಹೋದವಳೇ ಸೀದಾ ಆ ಉಡುಪನ್ನು ತೋರಿಸಿ ಇದು ನನಗೆ ಬೇಕೆಂದು ತಿಳಿಸಿದೆ. ಆದರೆ ಆತ “ಈಗ ಆರೂವರೆ ಆಗಿದೆ, ಇನ್ನು ನಾನು ವ್ಯಾಪಾರ ಮಾಡುವಂತಿಲ್ಲ,ದಯವಿಟ್ಟು ಕ್ಷಮಿಸಿ” ಎಂದು ವಿನಯಪೂರ್ವಕವಾಗಿ ನಿರಾಕರಿಸಿದ. ಅವರ ಸಮಯ ಮತ್ತು ನಿಯಮ ಪಾಲನೆಗಳನ್ನು ಕಂಡು ಬೆರಗಾದ ನಾನು ಸಪ್ಪೆ ಮೋರೆಯೊಡನೆ ಬರಿಗೈಯಲ್ಲಿ ಹಿಂತಿರುಗಿದೆ. ಆ ಉಡುಪನ್ನು ಕೊಳ್ಳಲಾಗಲಿಲ್ಲವೆಂದು ಸ್ವಲ್ಪ ಬೇಸರವಾದರೂ ಕೂಕೂ ಗಡಿಯಾರದ ವಿಸ್ಮಯವನ್ನು ಕಣ್ತುಂಬಿಕೊಂಡ ಸಾರ್ಥಕತೆ ನನ್ನದಾಗಿತ್ತು.

ಅರುಣಾ ರಾವ್‌

ಅರುಣಾ ರಾವ್

ಲೇಖಕರು

Chief Editor & Author

ವಿದ್ಯಾರ್ಥಿಗಳಿಗೆ ಸರಳ, ನಿಖರ ಹಾಗೂ ಉಪಯುಕ್ತ ಶೈಕ್ಷಣಿಕ ಮಾಹಿತಿ, ಭಾಷಣಗಳು ಮತ್ತು ವಿಜ್ಞಾನ ಮಾರ್ಗದರ್ಶನ ನೀಡುತ್ತಿರುವ ಮುಖ್ಯ ಸಂಪಾದಕರು.