"ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ"
ಹೌದು! ದಾಸರು ಹೇಳಿರುವಂತೆ ಗುರುವಿಗೆ ನಾವು ಗುಲಾಮರಾಗಬೇಕು. ಇಲ್ಲಿ ನೆರೆದಿರುವ ಎಲ್ಲರಿಗೂ ಆತ್ಮೀಯ ನಮಸ್ಕಾರ. ಶಿಕ್ಷಕರ ದಿನಾಚರಣೆಯ ಈ ಶುಭ ಸಂದರ್ಭದಲ್ಲಿ ನನ್ನೆಲ್ಲ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು. "ಒಂದಕ್ಷರಂ ಕಲಿಸಿದಾತಂ ಗುರು" ಎಂಬ ಮಾತಿನಂತೆ ನಾವು ಹುಟ್ಟಿದಾಗಿನಿಂದ ಇಲ್ಲಿಯವರೆಗೆ ಪ್ರತಿಯೊಂದು ಹಂತದಲ್ಲೂ ನಮ್ಮನ್ನು ತಿದ್ದಿ ತೀಡಿ ಸರಿದಾರಿಯಲ್ಲಿ ನಡೆಸಿದಂತಹ ಶಿಕ್ಷಕರು ಹಲವರು. ಆದ್ದರಿಂದಲೇ "ದೇಶದ ಭವಿಷ್ಯ ತರಗತಿಯ ನಾಲ್ಕು ಗೋಡೆಗಳ ಮಧ್ಯೆ ರೂಪುಗೊಳ್ಳುತ್ತಿದೆ" ಎಂಬ ಮಾತು ಜನಜನಿತವಾಗಿದೆ.
ಮೈಸೂರು ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರದ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ, ದೇಶದ ಅತ್ಯುತ್ತಮ ಹುದ್ದೆಯಾದ ರಾಷ್ಟ್ರಪತಿಯ ಸ್ಥಾನಕ್ಕೇರಿದ ಡಾ|| ಸರ್ವಪಲ್ಲಿ ರಾಧಾಕೃಷ್ಣನ್ ಜನಿಸಿದ್ದು 1888 ಸೆಪ್ಟೆಂಬರ್ 5 ರಂದು. ಇವರು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದರು. ವಿದ್ಯಾರ್ಥಿಗಳೆಲ್ಲರೂ ಸೇರಿ ತಮ್ಮ ಮೆಚ್ಚಿನ ಗುರುಗಳಿಗೆ ಹುಟ್ಟಿದ ಹಬ್ಬವನ್ನು ಆಚರಿಸಬೇಕೆಂದು ತಯಾರಿ ನಡೆಸುತ್ತಿದ್ದಾಗ ವಿದ್ಯಾರ್ಥಿ ಹಾಗೂ ಶಿಕ್ಷಕರ ಮಿತ್ರರಾದ ಡಾ.ರಾಧಾಕೃಷ್ಣನ್ ರವರು ನನ್ನ ಹುಟ್ಟುಹಬ್ಬ ಆಚರಿಸುವ ಬದಲು ಇಡೀ ದೇಶ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆ ಎಂದು ಆಚರಿಸಿದರೆ ನನಗೆ ಬಹಳ ಸಂತೋಷವಾಗುತ್ತದೆ ಎಂದು ಸಲಹೆ ನೀಡಿದರು. ಅಂದಿನಿಂದ ಸೆಪ್ಟೆಂಬರ್ 5 ನೇ ತಾರೀಖಿನಂದು ದೇಶದಾದ್ಯಂತ ಶಿಕ್ಷಕರ ದಿನಾಚರಣೆಯನ್ನು ಅದ್ಧೂರಿಯಿಂದ ಆಚರಿಸಲಾಗುತ್ತಿದೆ.
"ಗುರು ಬ್ರಹ್ಮ ಗುರು ವಿಷ್ಣು
ಗುರು ದೇವೋ ಮಹೇಶ್ವರ|
ಗುರು ಸಾಕ್ಷಾತ್ ಪರಬ್ರಹ್ಮ
ತಸ್ಮೈ ಶ್ರೀ ಗುರುವೇ ನಮಃ||
ಎಂಬ ಶ್ಲೋಕವು ಭಾರತೀಯ ಪರಂಪರೆಯಲ್ಲಿ ಗುರುವಿಗೆ ಇರುವ ಮಹತ್ವದ ಸ್ಥಾನವನ್ನು ತಿಳಿಸಿಕೊಡುತ್ತದೆ. ತಂದೆ ತಾಯಿಗಳು ನಮಗೆ ಸದಾ ಪೂಜನೀಯರು. ಅವರಂತೆಯೇ, ಅವರಷ್ಟೇ ಗೌರವಾನ್ವಿತ ಪೂಜ್ಯ ಸ್ಥಾನ ಗುರುವಿನದ್ದು. ಮಕ್ಕಳು ಮನೆಯಲ್ಲಿ ಕಳೆಯುವ ಸಮಯಕ್ಕಿಂತ ಹೆಚ್ಚಾಗಿ ಶಾಲೆಯಲ್ಲಿ ತಮ್ಮ ಗುರುಗಳ ಗುರುಗಳೊಡನೆ ಮತ್ತು ಸಹಪಾಠಿಗಳೊಡನೆ ಕಳೆಯುತ್ತಾರೆ. ಮಗುವಿನ ಮೇಲೆ ಶಿಕ್ಷಕರು ಬೀರುವ ಪ್ರಭಾವ ಆ ಮಗುವಿನ ವ್ಯಕ್ತಿತ್ವವನ್ನು ಮತ್ತು ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ದೇಶವನ್ನು ಕಟ್ಟುವಲ್ಲಿಯೂ ಶಿಕ್ಷಕರ ಪಾತ್ರ ಗಣನೀಯವಾಗಿದೆ. ವಿಜ್ಞಾನಿಯಾಗಲಿ, ವೈದ್ಯನೇ ಆಗಿರಲಿ ಎಲ್ಲರನ್ನೂ ದೇಶಕ್ಕೆ ಕೊಡುಗೆ ನೀಡುವುದು ಶಿಕ್ಷಕ ತಾನೆ! ಕೇವಲ ಪುಸ್ತಕದಲ್ಲಿರುವ ಪಾಠಗಳ ಜೊತೆಜೊತೆಗೆ ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳನ್ನು, ಸ್ವಯಂಶಿಸ್ತನ್ನು ರೂಢಿಸುವಲ್ಲಿ ಶಿಕ್ಷಕರು ಸದಾ ಶ್ರಮಿಸುತ್ತಾರೆ. ಬಹಳ ಕಡಿಮೆ ಪ್ರತಿಫಲ ದೊರೆಯುವ ಈ ಹುದ್ದೆಯನ್ನು ಒಂದು ಹುದ್ದೆಯನ್ನಾಗಿ ಕಾಣದೆ ಸಮಾಜಕ್ಕೆ ಸಲ್ಲಿಸುವ ಸೇವೆ ಎಂದು ಭಾವಿಸಿ ಹಗಲಿರಲು ವಿದ್ಯಾರ್ಥಿಗಳ ಏಳಿಗೆಗಾಗಿ ದುಡಿಯುವ ಶಿಕ್ಷಕರಿಗೆ ನಾವೆಲ್ಲರೂ ಆಜೀವ ಪರ್ಯಂತ ಆಭಾರಿಗಳಾಗಿರಬೇಕು ಎಂದು ಹೇಳುತ್ತಾ ಮತ್ತೊಮ್ಮೆ ನನ್ನ ಪ್ರೀತಿಯ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳನ್ನು ತಿಳಿಸುತ್ತಾ ನನ್ನ ಮಾತುಗಳನ್ನು ಮುಗಿಸುತ್ತೇನೆ. ಧನ್ಯವಾದಗಳು.