ತಪ್ಪಿಸಿಕೊಂಡ ಮಗುವಿಗೆ ಸಹಾಯ ಮಾಡಿದ ಅನುಭವ ಪ್ರಬಂಧ | Jnana Kirana

Helping a Lost Child: A Personal Experience

ಪ್ರಬಂಧ ಮತ್ತು ಪತ್ರ ಲೇಖನ ಆಗಸ್ಟ್ 27, 2026 3 ನಿಮಿಷ ಓದು
ತಪ್ಪಿಸಿಕೊಂಡ ಮಗುವಿಗೆ ಸಹಾಯ ಮಾಡಿದ ಅನುಭವ ಪ್ರಬಂಧ | Jnana Kirana
ಸಾರಾಂಶ (Summary)

ಶಾಲೆಯಿಂದ ಮನೆಗೆ ಬರುವಾಗ ದಾರಿ ತಪ್ಪಿದ ಮಗುವಿಗೆ ನೆರವು ನೀಡಿ ಮನೆಗೆ ಸೇರಿಸಿದ ಅನುಭವದ ಸರಳ ಕನ್ನಡ ಪ್ರಬಂಧ ಲೇಖನ ಇಲ್ಲಿದೆ. ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತ ಮಾಹಿತಿ.

ಒಬ್ಬ ಚಿಕ್ಕ ಹುಡುಗ ತನ್ನ ಮನೆಯಿಂದ ತಪ್ಪಿಸಿಕೊಂಡಿದ್ದು ನಿಮ್ಮ ಸಹಾಯ ಕೇಳಿದ್ದಾನೆ ಆಗ ನೀವು ಅವನಿಗೆ ಹೇಗೆ ಸಹಾಯ ಮಾಡಿದ್ದೀರಿ ಅವನನ್ನು ಹೇಗೆ ಮನೆ ಸೇರಿಸಿದರೆ ಸೇರಿಸಿದಿರಿ ವಿವರಿಸಿ.

" ಮನೆಯೇ ಮಂತ್ರಾಲಯ ಮನಸೇ ದೇವಾಲಯ" ಎಂಬ ಮಾತಿನಂತೆ ಮನೆ ನಮ್ಮ ಆಶ್ರಯ ತಾಣ. ಕೇವಲ ಮನುಷ್ಯರಿಗಷ್ಟೇ ಅಲ್ಲ, ಪ್ರಾಣಿ ಪಕ್ಷಿಗಳಿಗೂ ಕೂಡ ಮನೆಯೇ ಸರ್ವಸ್ವ. ಆದ್ದರಿಂದ ಪಕ್ಷಿಗಳು ಸಂಜೆಯಾಗುತ್ತಲೇ ತಮ್ಮ ಗೂಡುಗಳಿಗೆ ಮರಳುತ್ತವೆ. ಏಕೆಂದರೆ ಅಲ್ಲಿ ಸಿಗುವ ನೆಮ್ಮದಿ, ರಕ್ಷಣೆ ಮತ್ತು ಪ್ರೀತಿ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ. ಆದ್ದರಿಂದ ಮನೆಯಿಂದ ದೂರವಾದ ಮಕ್ಕಳು ಬಹಳ ನೋಯುತ್ತಾರೆ. ಮಕ್ಕಳಿಗಷ್ಟೇ ಅಲ್ಲ, ದೊಡ್ಡವರಿಗೂ ಕೂಡ ಮನೆಯಿಂದ ದೂರವಾದರೆ ನೋವು ತಪ್ಪಿದ್ದಲ್ಲ.

ಒಂದು ದಿನ ನಾನು ಶಾಲೆಯಿಂದ ಮನೆಗೆ ತೆರಳುತ್ತಿದ್ದೆ. ನಮ್ಮ ಮನೆ ಶಾಲೆಯಿಂದ ಕಾಲುನಡಿಗೆಯ ದೂರದಲ್ಲಿದೆ. ದಿನಪೂರ್ತಿ ಗಣಿತ, ವಿಜ್ಞಾನ, ಸಮಾಜಶಾಸ್ತ್ರಗಳ ಪಾಠ ಪ್ರವಚನಗಳನ್ನು ಕೇಳಿ ಆಯಾಸಗೊಂಡಿದ್ದರಿಂದ ಕಾಲೆಳೆದುಕೊಂಡು ನಿಧಾನವಾಗಿ ಹೋಗುತ್ತಿದ್ದೆ. ಒಂದು ರಸ್ತೆಯ ತಿರುವಿನಲ್ಲಿ ಮೂರ್ನಾಲ್ಕು ವರ್ಷದ ಪುಟ್ಟ ಬಾಲಕನೊಬ್ಬ ಅಳುತ್ತ ನಿಂತಿದ್ದನು. ಅವನ ಕಣ್ಣುಗಳಿಂದ ಕಣ್ಣು ಮೂಗುಗಳಿಂದ ಧಾರಾಕಾರವಾಗಿ ನೀರು ಸುರಿಯುತ್ತಿತ್ತು. ನಾನು ಅವನ ಪಕ್ಕಕ್ಕೆ ಹೋಗಿ ನಿಂತುಕೊಂಡೆ. ಆದರೆ ಅವನು ಅಳುತ್ತಲೇ ಇದ್ದ. ಇಲ್ಲಿ ಅವನ ತಂದೆ ತಾಯಿಗಳು ಯಾರಾದರೂ ಇದ್ದಾರೆಯೇ! ಎಂದು ಸುತ್ತಲೂ ಕಣ್ಣಾಡಿಸಿದೆ. ಆದರೆ ರಸ್ತೆಯಲ್ಲಿ ಸಾಗುತ್ತಿದ್ದ ಜನ ಅವರ ಪಾಡಿಗೆ ಅವರಿದ್ದರು. ಆದ್ದರಿಂದ ನಾನು, "ಏಕೆ ಅಳುತ್ತಿದ್ದೀಯ ?" ಎಂದು ಅವನನ್ನು ಕೇಳಿದ್ದೆ ತಡ, ಅವನು ಮತ್ತಷ್ಟು ಜೋರಾಗಿ ಅಳುವುದಕ್ಕೆ ಆರಂಭಿಸಿದ. ಜನರು ನನ್ನನ್ನೇ 'ಮಕ್ಕಳ ಕಳ್ಳ 'ಎಂದು ತಿಳಿದರೆ ಏನು ಗತಿ, ಎಂದು ನನಗೆ ಗಾಬರಿಯಾಯಿತು ತಕ್ಷಣ ಆಲೋಚಿಸಿ ಒಂದು ಚಾಕ್ಲೇಟನ್ನು ಹೊರ ತೆಗೆದೆ. ಚಾಕ್ಲೇಟ್ ಅನ್ನು ನೋಡಿ ಆ ಹುಡುಗನ ಮುಖ ಅರಳಿತು. ಅದನ್ನು ಕೊಡೆಂದು ನನ್ನಡೆಗೆ ಕೈ ಚಾಚಿದ. ಚಾಕ್ಲೇಟ್ ಅನ್ನು ನೋಡಿ ಆ ಹುಡುಗ ಅಳು ನಿಲ್ಲಿಸಿ ಕೊಡೆಂದು ನನ್ನ ಕಡೆಗೆ ಕೈಚಾಚಿದ. ನಾನು ಅವನಿಗೆ ಚಾಕಲೇಟ್ ಕೊಡುತ್ತಾ ಅವನಿಗೆ ಭರವಸೆ ಬರುವಂತೆ ಕಣ್ಣು ಮೂಗುಗಳನ್ನು ಒರೆಸಿದೆ. ಅಲ್ಲೇ ಪಕ್ಕದಲ್ಲಿ ಮುಚ್ಚಿದ್ದ ಅಂಗಡಿಯ ಮೆಟ್ಟಿಲ ಮೇಲೆ ಅವನನ್ನು ಕೂರಿಸಿಕೊಂಡು ಕುಳಿತೆ. ಚಾಕ್ಲೇಟ್ ನ ಪೇಪರ್ ಅನ್ನು ಬಿಚ್ಚಿಕೊಡುವಂತೆ ಅವನು ನನಗೆ ಕೊಟ್ಟ. ನಾನು ನಿಧಾನವಾಗಿ ಅದನ್ನು ಬಿಚ್ಚುತ್ತಾ ಅಳುತ್ತಿರುವ ಕಾರಣ ಏನೆಂದು ಕೇಳಿದೆ. ಚಾಕ್ಲೇಟ್ ಅನ್ನು ಸವಿಯುತ್ತಾ ಅವನು ಹೇಳತೊಡಗಿದ.

ಆ ಹುಡುಗನ ಹೆಸರು 'ವಿನಿತ್'. ತನ್ನ ತಾಯಿಯ ಜೊತೆ ಅಂಗಡಿಗೆ ಬಂದಿದ್ದನಂತೆ. ರಸ್ತೆಯಲ್ಲಿ ಬಲೂನು ಮಾರುತ್ತಿರುವವನನ್ನು ಕಂಡು ಅವನ ಹಿಂದೆ ಹಿಂದೆ ಬಂದುಬಿಟ್ಟನಂತೆ. ಹೀಗೆ ದಾರಿ ತಪ್ಪಿಸಿಕೊಂಡು ಅಳುತ್ತಾ ನಿಂತಿದ್ದೆ ಎಂದು ಹೇಳುವಷ್ಟರಲ್ಲಿ ಚಾಕಲೇಟು ಮುಗಿಯುತ್ತಾ ಬಂದಿದ್ದರಿಂದ ಮತ್ತೆ ಅಳುವುದಕ್ಕೆ ಪ್ರಾರಂಭಿಸಿದ್ದ. ಈಗ ನನಗೆ ದಿಕ್ಕೇ ತೋಚದಾಯಿತು. ಕ್ಷಣಕಾಲ ಆಲೋಚಿಸಿ, "ನಿಮ್ಮ ಅಪ್ಪ ಅಮ್ಮನ ಫೋನ್ ನಂಬರ್ ಏನಾದರೂ ತಿಳಿದಿದೆಯೇ?" ಎಂದು ಕೇಳಿದೆ. ಅವನು ಮುದ್ದು ಮುದ್ದಾಗಿ ನಾಲ್ಕೈದು ಸಂಖ್ಯೆಗಳನ್ನು ಹೇಳಿ ಸುಮ್ಮನಾದ. ಸ್ವಲ್ಪ ಸಮಯ ಆಲೋಚಿಸಿ ಅವನನ್ನು ಹತ್ತಿರದಲ್ಲಿದ್ದ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದೆ. ಅಲ್ಲಿ ಅವರಿಗೆ ವಿಷಯ ತಿಳಿಸಿದೆ. ಪೊಲೀಸರು ಆ ಹುಡುಗನನ್ನು ಅವರ ಅವನ ಪೋಷಕರಿಗೆ ಒಪ್ಪಿಸುವುದಾಗಿ ಹೇಳಿ ನನ್ನನ್ನು ಮನೆಗೆ ಕಳುಹಿಸಿದರು.

ಒಂದು ದೊಡ್ಡ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸಿದನೆಂಬ ಸಮಾಧಾನದಿಂದ ಮನೆಯನ್ನು ತಲುಪಿದೆ. ನನಗಾಗಿ ಕಾಯುತ್ತಿದ್ದ ಅಮ್ಮ ತಡವಾಗಿದ್ದಕ್ಕೆ ಚೆನ್ನಾಗಿ ಬೈದರು. ನಾನು ಏನನ್ನು ಪ್ರತಿಕ್ರಿಯಿಸದೆ ಕೈಕಾಲುಗಳನ್ನು ತೊಳೆದುಕೊಂಡು ಬಂದು ಅಮ್ಮ ಕೊಟ್ಟಿದ್ದ ತಿಂಡಿಯನ್ನು ತಿನ್ನುತ್ತಾ ನಿಧಾನವಾಗಿ ಅವಳಿಗೆ ನಡೆದ ಸಮಾಚಾರವನ್ನೆಲ್ಲಾ ತಿಳಿಸಿದೆ. ಆಗ ಅಮ್ಮನಿಗೂ ನನ್ನ ಕೆಲಸ ಕೇಳಿ ಸಂತೋಷವಾಯಿತು. ಅಷ್ಟರಲ್ಲಿ ನಮ್ಮ ಮನೆಯ ಫೋನು ರಿಂಗಣಿಸಿತು. ಹುಡುಗನ ತಾಯಿ ಪೊಲೀಸರಿಂದ ನನ್ನ ಫೋನ್ ನಂಬರ್ ಪಡೆದು ನನಗೆ ಧನ್ಯವಾದಗಳು ಅರ್ಪಿಸಲು ಕರೆ ಮಾಡಿದ್ದರು. ಅವರ ಮಾತುಗಳನ್ನು ಕೇಳಿ ನನಗೆ ಅತೀವ ಸಂತೋಷವಾಯಿತು ಕನ್ನಡ ತರಗತಿಯಲ್ಲಿ ಹೇಳಿಕೊಟ್ಟಿದ್ದ "ಯತ್ಪರಾರ್ಥಂ ಶರೀರಂ" ನಿಜ ಅಲ್ಲವೇ!.

ಅರುಣಾ ರಾವ್

ಲೇಖಕರು

Chief Editor & Author

ವಿದ್ಯಾರ್ಥಿಗಳಿಗೆ ಸರಳ, ನಿಖರ ಹಾಗೂ ಉಪಯುಕ್ತ ಶೈಕ್ಷಣಿಕ ಮಾಹಿತಿ, ಭಾಷಣಗಳು ಮತ್ತು ವಿಜ್ಞಾನ ಮಾರ್ಗದರ್ಶನ ನೀಡುತ್ತಿರುವ ಮುಖ್ಯ ಸಂಪಾದಕರು.