ಗುರು ಪೂರ್ಣಿಮೆ ಮಕ್ಕಳ ಕವನ - Guru Poem | Jnana Kirana

Guru – A Children’s Poem for Guru Purnima

ಮಕ್ಕಳ ಕವನಗಳು - ಶಿಶು ಗೀತೆಗಳು ಆಗಸ್ಟ್ 29, 2026 2 ನಿಮಿಷ ಓದು
ಗುರು ಪೂರ್ಣಿಮೆ ಮಕ್ಕಳ ಕವನ - Guru Poem | Jnana Kirana
ಸಾರಾಂಶ (Summary)

ಗುರು ಪೂರ್ಣಿಮೆಯ ಪ್ರಯುಕ್ತ ಅರುಣಾ ರಾವ್ ಬರೆದಿರುವ ಸುಂದರ ಮಕ್ಕಳ ಕವನ 'ಗುರು'. ತಾಯಿ, ತಂದೆ, ಶಿಕ್ಷಕರು ಮತ್ತು ಸಮಾಜದ ಗುರುಗಳ ಮಹತ್ವ ಸಾರುವ ಕವಿತೆ ಇಲ್ಲಿದೆ.

🙏🙏ಗುರು ಪೂರ್ಣಿಮೆಯ ಶುಭಾಶಯಗಳು 🙏🙏

ಮಕ್ಕಳ ಕವನ #ಗುರು

ಗುರು

ಬೆರಳ ಹಿಡಿದು ಹೆಜ್ಜೆ ಕಲಿಸಿ

ತುತ್ತು ಮಾಡಿ ಊಟ ಉಣಿಸಿ

ಜಗವನೆಮಗೆ ಪರಿಚಯಿಸಿದ

ತಾಯಿ ಗುರುವು ಅಲ್ಲವೇ?

ಜೊತೆಗೆ ನಡೆದು ಎಡವಗೊಡದೆ

ನೆರಳಿನಂತೆ ಹಿಂದೆ ನಿಂತು

ಬಾಳ ಹಾದಿ ತೋರಿದಂತ

ತಂದೆ ಗುರುವು ಅಲ್ಲವೇ?

ಬೆರಳ ಹಿಡಿದು ಅ ಆ ಬರೆಸಿ

ಸರಿ ತಪ್ಪು ತಿಳಿಯ ಪಡಿಸಿ

ವಿದ್ಯೆ ವಿನಯ ಹೇಳಿ ಕೊಟ್ಟ

ಮೇಷ್ಟ್ರು ಗುರುವು ಅಲ್ಲವೇ?

ಏಟು ತಿಂದರೂನು ನಗುತ

ತಾಯ ಸೆರಗ ಹಿಡಿದು ಬರುತ

ಸಹನೆ ಪಾಠ ತಿಳಿಸಿ ಕೊಟ್ಟ

ಮಗುವು ಗುರುವು ಅಲ್ಲವೇ?

ಕೈಯ ಚೀಲ ಮರೆತು ಬರಲು

ಚಾಲಕನದ ಹೊತ್ತು ತರಲು

ಪ್ರಾಮಾಣಿಕತೆ ಮೆರೆದ ಆತ

ನಿಜದಿ ಗುರುವು ಅಲ್ಲವೇ?

ಒಂದಕ್ಷರಂ ಕಲಿಸಿದಾತ

ಗುರುವಾಗುವರೆಂಬುವರು

ಪ್ರತಿ ಹೆಜ್ಜೆಗು ಗುರುಗಳಿಹರು

ಕೋಟಿ ನಮನ ಅವರಿಗೆ

🖌ಅರುಣಾ ರಾವ್

ಅರುಣಾ ರಾವ್

ಲೇಖಕರು

Chief Editor & Author

ವಿದ್ಯಾರ್ಥಿಗಳಿಗೆ ಸರಳ, ನಿಖರ ಹಾಗೂ ಉಪಯುಕ್ತ ಶೈಕ್ಷಣಿಕ ಮಾಹಿತಿ, ಭಾಷಣಗಳು ಮತ್ತು ವಿಜ್ಞಾನ ಮಾರ್ಗದರ್ಶನ ನೀಡುತ್ತಿರುವ ಮುಖ್ಯ ಸಂಪಾದಕರು.