ಹಬ್ಬ-
ನಾನು ಚಿಕ್ಕವಳಿದ್ದಾಗ ಹಬ್ಬಗಳ ಆಗಮನ ವನ್ನೇ ಎದಿರುನೋಡುತ್ತಿದ್ದೆ. ಶಾಲೆಗೆ ರಜೆ ಎಂಬ ಕಾರಣ ಒಂದು ಕಡೆಯಾದರೆ ತರತರದ ಸಿಹಿ ತಿನಿಸುಗಳನ್ನು ತಿನ್ನುವ ಯೋಗ ಮತ್ತೊಂದು ಕಡೆ. ಬೆಳಗಿನ ಜಾವಕ್ಕೇ ಎದ್ದು ಮೈಗೆ, ತಲೆಗೆ ಎಣ್ಣೆ ತಿಕ್ಕಿಸಿಕೊಂಡು ಘಮಗುಡುವ ಸೀಗೇಕಾಯಲ್ಲಿ ಸ್ನಾನ ಮಾಡಿದರೆ ಕೂದಲು ಫಳಫಳಾಂತ ಹೊಳೆಯುತ್ತಿತ್ತು. ದೇವರ ಪೂಜೆಗೆ ಮನೆಯಂಗಳದಲ್ಲಿ ಅರಳಿರುವ ಗುಲಾಬಿ ಬಣ್ಣ ಬಣ್ಣದ ದಾಸವಾಳ, ಸ್ಪಟಿಕ, ಶಂಖು, ಪುಷ್ಪ
ಗಳೇ ಸಾಕಾಗುತ್ತಿತ್ತು. ಹಬ್ಬದ ಹಿಂದಿನ ದಿನವೇ ಮನೆಯ ಮುಂಭಾಗದ ಮಣ್ಣಿನ ರಸ್ತೆಯನ್ನು ಅಮ್ಮ ಸಗಣಿಯಿಂದ ಸಾರಿಸುತ್ತಿದ್ದಳು. ಅಷ್ಟಗಲದ ಜಾಗದ ಮಧ್ಯೆ ಬೌಂಡರಿಯೊಂದನ್ನು ಹಾಕಿಕೊಂಡು ನಾನೂ ನಮ್ಮಕ್ಕ ಕಾಂಪಿಟೇಷನ್ ಮೇಲೆ ಒಬ್ಬರಿಗಿಂತ ಒಬ್ಬರು ದೊಡ್ಡ ದೊಡ್ದ ರಂಗೋಲಿಗಳನ್ನು ಬಿಡಿಸುತ್ತಿದ್ದೆವು. ರಂಗೋಲಿ ಹಾಕಿದ ಮೇಲೆ ಕೆಮ್ಮಣ್ಣನ್ನು ಹಾಕಲೇಬೇಕೆಂಬ ನಿಯಮವಿತ್ತು. ಏಕೆಂದರೆ ಬಿಳಿ ರಂಗೋಲೆಯನ್ನು ಮಾತ್ರ ಹಾಕಿದರೆ ಅಶುಭವೆಂಬ ಭಾವನೆ ಅಮ್ಮನಿಗಿದ್ದುದರಿಂದ ಕೆಮ್ಮಣ್ಣಿನಿಂದ ರಂಗೋಲಿಗಳನ್ನು ಮತ್ತಷ್ಟು ಸುಂದರಗೊಳಿಸುತ್ತಿದ್ದೆವು.
ಗಣೇಶನ ಹಬ್ಬದಲ್ಲಿ ಗೇಣುದ್ದದ ಗಣಪನ ವಿಗ್ರಹದ ಜೊತೆಗೆ ಪುಟ್ಟ ಗೌರಮ್ಮಳೂ ಮನೆಗೆ ಆಗಮಿಸುತ್ತಿದ್ದಳು. ದೀಪಾವಳಿಯಲ್ಲಿ ಒಂದೆರಡು ಮತಾಪು ಪೊಟ್ಟಣಗಳು, ನಾಲ್ಕಾರು ಮಣ್ಣಿನ ಹಣತೆಗಳು, ಸಂಕ್ರಾಂತಿಗೆರಡು ಕಬ್ಬಿನ ಜಲ್ಲೆಗಳು, ಪೊಂಗಲ್ ಪರಮಾನ್ನವಾಗಿ ಸಡಗರ ಸಂಭ್ರಮಗಳು ಮುಗಿಲು ಮುಟ್ಟುತ್ತಿದ್ದವು. ಯಾವುದಾದರೊಂದು ಹಬ್ಬಕ್ಕೆ ಹೊಸ ಉಡುಪುಗಳು ದೊರೆತರೆ ಅದೇ ಮಹಾ ಭಾಗ್ಯವೆಂದು ಬೀಗುತ್ತಿದ್ದೆವು. ಪೂಜಾ ಸಮಯದಲ್ಲಿ ಮನೆಯವರೆಲ್ಲರೂ ಹಾಜರಾಗಿ, ತೀರ್ಥ ಪ್ರಸಾದಗಳನ್ನು ಸೇವಿಸಬೇಕೆಂಬ ನಿಯಮವನ್ನು ತಪ್ಪದೆ ಪಾಲಿಸುತ್ತಿದ್ದೆವು.ದೇವರ ನೈವೇದ್ಯಕ್ಕೆಂದು ಮಾಡಿದ ಸಜ್ಜಿಗೆ ಕರ್ಜಿಕಾಯಿಗಳು ಹೊಟ್ಟೆಯನ್ನಷ್ಟೇ ಅಲ್ಲದೆ, ನಾಲಿಗೆಯನ್ನೂ ತೃಪ್ತಿಪಡಿಸುತ್ತಿದ್ದವು.
ಆದರೆ ಇಂದಿನ ಹಬ್ಬಗಳೆಲ್ಲ ತಮ್ಮ ನಿಜವಾದ ಮಹತ್ವವನ್ನು, ವೈಶಿಷ್ಟ್ಯತೆಯನ್ನು ಕಳೆದುಕೊಂಡು ಆಡಂಬರಗಳಾಗಿ ಪರಿವರ್ತ್ತಿತಿತವಾಗುತ್ತಿದೆ. ಮನೆಯ ಮುಂದಿನ ತೋರಣಗಳಿಂದ ಹಿಡಿದು ದೇವರ ಅಲಂಕಾರದವರೆಗೆ ಎಲ್ಲವೂ ಆಡಂಬರವೇ! ಆಳುದ್ದದ ಗಣೇಶ ವಿಗ್ರಹವನ್ನು ತಂದರೆ ಮಾತ್ರ ಗಣೇಶನ ಹಬ್ಬ, ಸಾವಿರಾರು ರೂಪಾಯಿಗಳ ಪಟಾಕಿಗಳನ್ನು ಹೊಡೆದರೆ ಮಾತ್ರ ದೀಪಾವಳಿಯ ಹಬ್ಬ ಎನ್ನುವಂತಾಗಿದೆ. ಇನ್ನು ಶ್ರಾವಣ ಮಾಸದಲ್ಲಿ ಬರುವ ವರಮಹಾಲಕ್ಷ್ಮಿ ಹಬ್ಬವನ್ನಂತೂ ಕೇಳಲೇ ಬೇಡಿ. ಈ ಬಾರಿ ನನ್ನ ವಿದ್ಯಾರ್ಥಿನಿಯೊಬ್ಬಳು ಹಬ್ಬದ ದಿನ ತನ್ನ ಮನೆಗೆ ಬರಲೇಬೇಕೆಂದು ಬಹಳ ಒತ್ತಾಯ ಮಾಡಿದ್ದಳು. ಸಾಧಾರಣವಾಗಿ ಯಾವ ವಿದ್ಯಾರ್ಥಿಗಳ ಮನೆಗಳಿಗೂ ಹೋಗಲಿಚ್ಛಿಸದ ನಾನು ಅವಳ ಪ್ರೀತಿಗೆ ಕಟ್ಟುಬಿದ್ದು ಬರುತ್ತೇನೆಂದು ಭರವಸೆ ನೀಡಿದೆ. ಹಬ್ಬದ ದಿನ ಸಂಜೆ ಮನೆಯಲ್ಲಿ ದೇವರಿಗೆ ದೀಪ ಹಚ್ಚಿ, ಓಲಾ ಆಟೋ ಬುಕ್ ಮಾಡಿಕೊಂಡು ಅವಳ ಮನೆಗೆ ಹೊರಟೆ. ನನಗಾಗಿ ಬಾಗಿಲಲ್ಲೇ ಕಾಯುತ್ತಾ ನಿಂತಿದ್ದವಳು ನನ್ನನ್ನು ಕಂಡೊಡನೆ ಸಡಗರದಿಂದ ಗೇಟಿನ ಬಳಿಗೇ ಓಡಿಬಂದು 'ಬನ್ನಿ ಮೇಡಂ' ಎಂದು ಆತ್ಮೀಯವಾಗಿ ಸ್ವಾಗತಿಸಿ, ಒಳಗೆ ಕರೆದೊಯ್ದಳು.
ಮನೆಯೊಳಗೆ ಹೆಜ್ಜೆ ಹಾಕುತ್ತಿದ್ದಂತೆ ವಿಶಾಲವಾದ ನಡುಮನೆಯಲ್ಲಿ ಬೆಳ್ಳಿಯ ದೊಡ್ಡ ಮುಖವಾಡದ ವರಮಹಾಲಕ್ಷ್ಮಿಯನ್ನು ಎತ್ತರವಾದ ಪೀಠದಲ್ಲಿ ಕುಳ್ಳರಿಸಲಾಗಿತ್ತು. ಆಳಡಿ ಎತ್ತರದ ಬೆಳ್ಳಿ ದೀಪಗಳು ದೇವಿಯ ಮುಂದೆ ಪ್ರಕಾಶಮಾನವಾಗಿ ಬೆಳಗುತ್ತಿದ್ದವು.ಹೂ ಬುಟ್ಟಿ, ಮಂಗಳಾರತಿ ಹಲಗೆಗಳು, ಕಾಮಾಕ್ಷಿ ದೀಪ, ತಟ್ಟೆಗಳು ಎಲ್ಲವೂ ಬೆಳ್ಳಿಯದೇ. ವಿವಿಧ ಪುಷ್ಪಗಳ ತೋಮಾಲೆಗಳು, ಜರತಾರಿ ಸೀರೆ, ಚಿನ್ನದ ಆಭರಣಗಳನ್ನು ತೊಟ್ಟ ತಾಯಿಯಂತೂ ಝಗಮಗಿಸುತ್ತಿದ್ದಳು. ಹೂವಿನಹಾರಗಳ ಮಧ್ಯೆ ಐನೂರು ರೂಪಾಯಿ ನೋಟುಗಳ ಹಾರವೊಂದು ದೇವಿಯ ಕೊರಳನ್ನು ಅಲಂಕರಿಸಿತ್ತು. ಮಂಟಪದ ಮುಂಭಾಗದ ತಟ್ಟೆಗಳಲ್ಲಿ ಲಡ್ಡು, ಕರ್ಜಿಕಾಯಿ, ಹೋಳಿಗೆ, ಚಕ್ಕುಲಿ, ಪುರಿ ಉಂಡೆ, ಕೋಡುಬಳೆ ಮುಂತಾದ ನಾನಾ ಬಗೆಯ ಭಕ್ಷ್ಯ ಭೋಜ್ಯಗಳನ್ನು ಒಪ್ಪವಾಗಿ ಜೋಡಿಸಲಾಗಿತ್ತು. ಜೊತೆಗೆ ಬೆಳ್ಳಿ ನಾಣ್ಯಗಳ ರಾಶಿಯ ತಟ್ಟೆಯೊಂದು ಕಣ್ಣಿಗೆ ಬಿತ್ತು. ನಮ್ಮ ಮನೆಯಲ್ಲೂ ಹಬ್ಬ ಆಚರಿಸಿ ದೇವಿಗೆ ಇಪ್ಪತ್ತೈದು ಹೋಳಿಗೆಗಳನ್ನಷ್ಟೇ ನೈವೇದ್ಯ ಮಾಡಿ ತೃಪ್ತಿಪಡಿಸಿದ್ದ ನಾನು, ಇಷ್ಟೆಲ್ಲ ತಿಂಡಿಗಳನ್ನು ಕಂಡು ಆಶ್ಚರ್ಯ ಚಕಿತಳಾದೆ. "ಇಷ್ಟೆಲ್ಲಾ ತಿಂಡಿಗಳನ್ನು ಮಾಡಿದ್ದೀರಿ" ಎಂದು ಆಕೆಗೆ ಮೆಚ್ಚುಗೆ ಸೂಚಿಸಿದೆ. ಅದಕ್ಕವರು ನಸುನಕ್ಕು, ಈ ಕಾಲದಲ್ಲಿ ಇಷ್ಟೆಲ್ಲಾ ಯಾರು ಮಾಡ್ತಾರೆ ಮೇಡಂ? ಇದಕ್ಕೆಲ್ಲಾ ಟೈಂ ಎಲ್ಲಿದೆ? ಹಬ್ಬದ ಶಾಪಿಂಗಿಗೇ ಟೈಂ ಸಾಕಾಗಲ್ಲ, ಜೊತೆಗೆ ನೆನ್ನೆ ಪೂರ ಬ್ಯೂಟಿ ಪಾರ್ಲರ್ನಲ್ಲೇ ಸರಿಹೋಯ್ತು......... ಅಲ್ಲೀನೂ ರಷ್ಯೋ ರಷ್ಯು ....... ಕಾದೂ ಕಾದೂ ಸಾಕಾಗೋಯ್ತು....... ರಾತ್ರಿ ಮನೇಗ್ಬಂದಾಗ ಎಂಟು ಗಂಟೆ. ನಮ್ಮನೆ ಹತ್ರ ಶಣೈ ಸ್ಟೋರ್ ನಲ್ಲಿ ತಿಂಡಿಗಳು ಬಾಳ ರುಚಿಯಾಗಿರುತ್ತೆ. ನಾನು ಪ್ರತೀ ವರ್ಷ ಅಲ್ಲಿಂದಾನೇ ತರಿಸೋದು, ಬೇಕಾದ್ರೆ ನೀವೂ ಆರ್ಡರ್ ಕೊಡಬಹುದು, ರುಚಿ ನೋಡಿ ಎನ್ನುತ್ತಾ ಒಂದೆರಡು ಕೋಡುಬಳೆ ಚಕ್ಕುಲಿ, ಮೈಸೂರುಪಾಕಿನ ಬಿಳ್ಳೆಯೊಂದನ್ನು ತಿನ್ನಲು ಕೊಟ್ಟರು. ಅವರ ವಿವರಣೆಯನ್ನು ಕೇಳಿ, ನನ್ನ ಬಾಯಿಂದ ಮಾತೇ ಹೊರಡದಾಯಿತು. ಸದ್ಯ ಪೂಜೆಯ ಸಮಯಕ್ಕಾದರೂ ಪಾರ್ಲರ್ನಿಂದ ಬಿಡುಗಡೆ ಸಿಕ್ಕಿದ್ದಕ್ಕಾಗಿ ವರಮಹಾಲಕ್ಷ್ಮಿ ಸಮಾಧಾನಪಟ್ಟಿರಬೇಕು. ಮನೆಯ ವಾತಾವರಣ ಈ ರೀತಿಯಿದ್ದರೆ ಪೂಜೆಯ ಪವಿತ್ರತೆ, ಹಬ್ಬಗಳ ಮಹತ್ವದ ಬಗ್ಗೆ ಮುಂದಿನ ಪೀಳಿಗೆ ಕಲಿಯುವುದಾದರೂ ಏನೆಂಬ ಪ್ರಶ್ನೆ ಮಿಂಚಿ ಮಾಯವಾಯಿತು. ಅಷ್ಟರಲ್ಲಿ ನನ್ನ ವಿದ್ಯಾರ್ಥಿನಿಯು ತಾಯಿಯ ಅದೇಶದಂತೆ ಬೆಳ್ಳಿ ತಟ್ಟೆಯಲ್ಲಿ ಅರಿಶಿನ-ಕುಂಕುಮ, ಬಳೆಗಳ ಜೊತೆಗೆ ರೇಷಿಮೆ ಕಣವನ್ನು ನೀಡಿ, ಕಾಲಿಗೆ ನಮಸ್ಕರಿಸಿದಳು. ಮುಂದಿನ ವರ್ಷಾನೂ ನೀವು ಕಂಡಿತ ನಮ್ಮನೆಗೆ ಹಬ್ಬಕ್ಕೆ ಬರಬೇಕೆಂದು ಹೇಳುತ್ತಾ, ಗೇಟಿನವರೆಗೂ ಬಂದು ಬೀಳ್ಕೊಂಡಳು.
ಅವರ ಬಗ್ಗೆಯೇ ಆಲೋಚಿಸುತ್ತಾ ಕುಳಿತಿದ್ದ ನನಗೆ ಆಟೋದವನು, "ಈ ರೋಡಲ್ಲಿ ತುಂಬಾ ಟ್ರಾಪಿಕ್ ಜಾಮ್ ಮೇಡಂ, ಆ ಕಡೆಯಿಂದ ಹೋಗ್ತೀನಿ ಎಂದು ಹೇಳಿ, ಬೇರೆ ರಸ್ತೆಯಿಂದ ಬಳಸಿಕೊಂಡು ಹೋಗತೊಡಗಿದ. ಯಾವಾಗಲೂ ಆಟೋದವರ ಜೊತೆ ವಾಗ್ವಾದಕ್ಕೆ ಇಳಿಯುವ ನಾನು, ಆ ದಿನವೇಕೋ ಮೌನಕ್ಕೆ ಶರಣಾಗಿದ್ದೆ. ಆಟೋ ನನಗೆ ಪರಿಚಯವಿಲ್ಲದ ಹತ್ತಾರು ರಸ್ತೆಗಳಲ್ಲಿ ಅಲೆದಾಡುತ್ತಾ ಸಣ್ಣ ಗಲ್ಲಿಯೊಂದಕ್ಕೆ ತಿರುಗಿತು. ಅದು ತೀರಾ ಚಿಕ್ಕದಾಗಿದ್ದುದರಿಂದ ಕಾರೊಂದು ಮುಂದಕ್ಕೆ ಹೋಗಲಾರದೆ, ಹಿಂದಕ್ಕ ಬರಲಾಗದೆ ಪರದಾಡುತ್ತಿದ್ದುದರಿಂದ ಉಳಿದ ವಾಹನಗಳೆಲ್ಲಾ ಅಲ್ಲಿಯೇ ನಿಂತು ಹೋಗಿದ್ದವು. ಹತ್ತಾರು ನಿಮಿಷಗಳು ಸುಮ್ಮನಿದ್ದ ಆಟೋದವನು ತಾಳ್ಮೆ ಕಳೆದುಕೊಂಡು, ಬೆಂಗಳೂರಿನ ರಸ್ತೆಗಳನ್ನೂ, ರಾಜಕಾರಣಿಗಳನ್ನೂ ಬಾಯಿಗೆ ಬಂದಂತೆ ಬಯ್ಯತೊಡಗಿದ. ನಾನಿದೇನನ್ನೂ ತಲೆಗೆ ಹಾಕಿಕೊಳ್ಳದೆ ಆಟೋದಿಂದ ಹೊರಗಿಣುಕಿದೆ.
ಅಲ್ಲೊಂದು ಚಿಕ್ಕ ಶೀಟಿನ ಮನೆ. ಜಂಕ್ ಶೀಟನ್ನು ಹೊದ್ದಿಸಿದ್ದ ಆ ಮನೆಯೊಂದು ವಠಾರದಲ್ಲಿತ್ತು. ಅಡುಗೆಮನೆ ಮತ್ತು ನಡುಮನೆಗಳು ಮಾತ್ರವಿದ್ದ ಸುಮಾರು ಆರು ಮನೆಗಳು. ಅದರಲ್ಲೊಂದು ಮನೆಯ ನಡುಮನೆಯ ಬಾಗಿಲು ರಸ್ತೆಗೆ ತೆರೆದುಕೊಂಡಿದ್ದರಿಂದ ಮನೆಯ ಸರ್ವಸ್ವವೂ ಸಾರ್ವಜನಿಕವಾಗಿತ್ತು. ಬಾಗಿಲಿಗೆ ನೇರವಾಗಿ ವರಮಹಾಲಕ್ಷ್ಮಿಯನ್ನು ಕೂಡಿಸಿದ್ದರು. ಅರಿಸಿನ ಹಚ್ಚಿದ ತೆಂಗಿನಕಾಯಿಗೆ ಗುಲಾಬಿ ಹೂ ಮುಡಿಸಿ, ಚೆಂಡುವ್ವಿನ ಹಾರವನ್ನು ಹಾಕಲಾಗಿತ್ತು. ದೇವರ ಮುಂದೆ ಗೇಣುದ್ದದ ಹಿತ್ತಾಳೆ ದೀಪಗಳು ಬೆಳಗುತ್ತಿದ್ದವು. ಒಂದುಚಿಪ್ಪು ಬಾಳೆಹಣ್ಣು, ಅರಿಶಿನ ಕುಂಕುಮದ ತಟ್ಟೆಯನ್ನು ಇಡಲಾಗಿತ್ತು. ಬಾಗಿಲಿನಲ್ಲಿ ಬಣ್ಣಬಣ್ಣದ ರಂಗೋಲಿ ಹಾಕಲಾಗಿತ್ತು. ಬಹುಶಃ ಮನೆಯಾಕೆಯೇ ಇಟ್ಟಿರಬಹುದೇನೋ! ಅದೇಕೋ
ನನ್ನ ಮನಸ್ಸು ಈಗಷ್ಟೇ ಕಂಡ ಎರಡೂ ಮನೆಗಳ ಹಬ್ಬದ ಆಚರಣೆಯನ್ನು ಮೌನವಾಗಿ ತುಲನ ಮಾಡತೊಡಗಿತು. "ಅಕ್ಕ ಇದ್ದರೆ ಭಾವ ರೊಕ್ಕ ಇದ್ದರೆ ಸಂತೆ" ಜನಪದ ತ್ರಿಪದಿ ನೆನಪಾಯಿತು. ಅಂತೂ ವರಮಹಾಲಕ್ಷ್ಮಿಯೂ ಆಡಂಬರದ ಪ್ರಿಯಳೇ ಏನೋ! ಹಣವಂತರ ಮನೆಗಷ್ಟೇ ಹೋಗ ಬಯಸುವಳೇನೋ ಎಂದೆನಿಸಿದ್ದಂತೂ ನಿಜ.