ಜೀವನವು ಅನಿರೀಕ್ಷಿತ ಆಕಸ್ಮಿಕಗಳ ಆಗರ. ಅದರಲ್ಲೂ ೨೦೨೦ ನಾವೆಂದೂ ಕಂಡು ಕೇಳರಿಯದ, ಕನಸಿನಲ್ಲಿಯೂ ಎದುರಿಸಿರದ ಘಟನೆಗಳಿಗೆ ಸಾಕ್ಷಿಯಾಗಿ ನೀತಿದೆ. " ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ" ಎಂಬ ದಾಸವಾಣಿ ಇದೀಗ ತನ್ನ ಅರ್ಥ ಕಂಡುಕೊಂಡು ಮನುಜ ಪ್ರಾಣ ಭಯದಿಂದ ತತ್ತರಿಸಿ ಹೋಗುವಂತೆ ಮಾಡಿದ ಮಹಾಮಾರಿ ಕರೋನಾ.ಹೆಣ್ಣು, ಹೊನ್ನು, ಮಣ್ಣು, ಅಧಿಕಾರ, ಅಂತಸ್ತು , ಆಸ್ತಿ ಯಾವುದೂ ನಮ್ಮನ್ನು ಸಾವಿನಿಂದ ಕಾಪಾಡಲಾರವು ಎಂಬ ಕಟುಸತ್ಯವನ್ನು ಜಗಜಾಹೀರು ಮಾಡಿಬಿಟ್ಟಿತು ಎಂದರೆ ತಪ್ಪಾಗಲಾರದು.
ಇಂಥಹ ಸಂದರ್ಭದಲ್ಲೇ ಜಗತ್ತಿನ ಬಲಿಷ್ಠ ರಾಷ್ಟ್ರಗಳೂ ಸೇರಿದಂತೆ ಎಲ್ಲರೂ ' ಲಾಕ್ ಡೌನ್' ಎಂಬ ಬೀಜ ಮಂತ್ರವನ್ನು ಪಠಿಸಲು ಆರಂಭಿಸಿದಾಗ ಭಾರತ ಕೂಡ ಇದಕ್ಕೆ ಹೊರತಾಗಲಿಲ್ಲ. ಅದರಂತೆ ಮಾರ್ಚ್ ಕೊನೆಯ ವೇಳೆಗೆ ಎಲ್ಲರೂ ತಮ್ಮ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ, ' ಮನೆಯೇ ಮಂತ್ರಾಲಯ' ಎಂದು
ಭಾವಿಸಿ ಒಂದು ತಿಂಗಳಾದ್ಯಂತ ಮನೆಯಲ್ಲೇ ಇರಬೇಕಾಯಿತು. ಶಾಲೆ ಕಛೇರಿಗಳು, ಕಾರ್ಖಾನೆಗಳು ಮುಚ್ಚಲ್ಪಟ್ಟವು. ವಾಹನ ಸಂಚಾರ ಸ್ಥಗಿತಗೊಂಡಿತು. ಆ ಸಂದರ್ಭದಲ್ಲಿ ನಾವೇನೋ 'ಬೆಚ್ಚಗಿನ ಮನೆಯಿರಲು' ಎಂದು ಮನೆಯೊಳಗೆ ಸೇರಿ ಕುಟುಂವದವರೊಡನೆ ಮಜವಾಗಿ ಕಾಲ ಕಳೆಯುತ್ತಾ, ತರಾವರಿ ಅಡುಗೆಗಳನ್ನು ಮಾಡಿಕೊಂಡು ತಿಂದು ಸುಖಿಸುತ್ತಿರಬೇಕಾದರೆ, ಜೀವದ ಹಂಗು ತೊರೆದು ತಮ್ಮ ಮನೆಯವರಿಂದಲೂ ದೂರವಾಗಿ, ಕಾಯಿಲೆ ಬರಬಹುದೆಂಬ ಅರಿವಿದ್ದರೂ 'ದುಡಿಮೆಯೇ ದೇವರು' ಎಂಬಂತೆ ತಮ್ಮ ಕರ್ತವ್ಯವನ್ನು ಪಾಲಿಸಿದ ವೈದ್ಯರು, ದಾದಿಯರು, ಪೋಲೀಸರು ಸಮಾಜ ಸೇವಕರು, ಆಶಾ ಕಾರ್ಯಕರ್ತೆಯರು ಮುಂತಾದವರು ಸಮಾಜದಲ್ಲಿ
ಎಲ್ಲರ ಮಾನ್ಯತೆಗೆ ಪಾತ್ರರಾದರು. ಇವರ ಜೊತೆ ಜೊತೆಯಲ್ಲೇ ಆ ಸಮಯದಲ್ಲಿ ಕಾರ್ಯ ನಿರ್ವಹಿಸಿದ ಯಾರ ಗಮನಕ್ಕೂ ಬಾರದೆ ಎಲೆ ಮರೆಯ ಕಾಯಿಯಂತಿದ್ದ ವರ್ಗವೆಂದರೆ 'ಪೌರ ಕಾರ್ಮಿಕರದ್ದು'.
ಪ್ರತಿದಿನ ನಮ ಮುಂಜಾನೆಯ ಕೆಲಸಗಳಲ್ಲಿ ಮನೆಯ ತ್ಯಾಜ್ಯ ವಿಲೇವಾರಿಯೂ ಅತಿ ಮುಖ್ಯವಾದ ಕೆಲಸಗಳಲ್ಲಿ ಒಂದು. ಎಂದಾದರೊಂದು ದಿನ ಕಸದ ಗಾಡಿ ಸಂಗ್ರಹಣೆಗೆ ಬರಲಿಲ್ಲವೆಂದರೆ ಮಾರನೆಯ ದಿನಕ್ಕೇ ಕೊಳೆತು ನಾರುವ ಈ ಕಸ ಮುಜುಗರದ ಜೊತೆಗೆ ಅಸಹ್ಯವನ್ನುಂಟು ಮಾಡುತ್ತದೆ. ತ್ಯಾಜ್ಯ ಸಂಗ್ರಹಣೆಯ ಜೊತೆಗೆ ನಾವೆಲ್ಲರೂ ತಿರುಗಾಡುವ ರಸ್ತೆಗಳನ್ನು ಗುಡಿಸಿ, ಅವುಗಳ ಸ್ಚಚ್ಛತೆಯನ್ನು ಕಾಪಾಡುವಲ್ಲಿ ಪೌರ ಕಾರ್ಮಿಕರ ಪಾತ್ರ ಅಪಾರ. ಎಲ್ಲರೂ ಕೊರೋನಾ ಎಂಬ ಭಯಾನಕ ರೋಗಕ್ಕೆ ಹೆದರಿ ಮನೆಯ ಮೂಲೆಗಳನ್ನು ಸೇರಿದ್ದ ಪರಿಸ್ಥಿತಿಯಲ್ಲಿ ಅವರಿವರು ತುಪ್ಪಿದ ಎಂಜಲು, ಮಾಡಿದ ಮಲ ಮೂತ್ರ ವಿಸರ್ಜನೆ, ತಿಂದು ಬಿಸಾಡಿದ ತ್ಯಾಜ್ಯಗಳನ್ನು ಗುಡಿಸುತ್ತಾ, ಜೀವ ಅಂಗೈಯಲ್ಲಿಡಿದು ಬದುಕಿದ ಇವರು ಕರೋನಾ ಸಮಯದಲ್ಲೂ ದುಡಿದ ಸಿಪಾಯಿಗಳ ಸಾಲಿಗೇ ಸೇರದಿದ್ದಾರೇ?
ಯಶೋದಮ್ಮ ರಾಜಾಜಿನಗರದ ವಾರ್ಡಿನಲ್ಲಿ ಕಸ ಗುಡಿಸುವ ಮಹಿಳೆ. ವಾಸವಾಗಿರುವುದು ಶ್ರೀರಾಮಪುರದಲ್ಲಿ. ಮುದ್ದಾದ ಎರಡು ಮಕ್ಕಳ ತಾಯಿ. ದಿನಾಗಲೂ ಬಸ್ಸಿನಲ್ಲಿ ರಾಜಾಜಿನಗರಕ್ಕೆ ಬಂದು, ಬೆಳಗಿನಿಂದ ಕಸ ಗುಡಿಸಿ, ಗುಡಿಸಿದ ಕಸವನ್ನು ಲಾರಿಗಳಲ್ಲಿ ತುಂಬಿಸಿ, ಸಂಜೆಯ ವೇಳೆಗೆ ಮನೆ ಸೇರುತ್ತಿದ್ದರು. ಆ ಸಂದರ್ಭದಲ್ಲಿ ಆಕೆ ಗುಡಿಸುವ ರಸ್ತೆಗಳ ಮನೆಯವರು ಆಕೆಯ ಕಷ್ಟ ಸುಖಗಳನ್ನು ವಿಚಾರಿಸಿ ಆಗೀಗ ಟೀ, ಕಾಫಿ, ತಿಂಡಿ-ತೀರ್ಥಗಳನ್ನು ನೀಡುತ್ತಿದ್ದರು. ಯಾವಾಗಲಾದರೊಮ್ಮೆ ತಮ್ಮ ಹಾಗೂ ತಮ್ಮ ಮಕ್ಜಳ ಹಳೆಯ ಬಟ್ಟೆಗಳನ್ನು ಸಹ ಕೊಡುತ್ತಿದ್ದುದುಂಟು. ಆದರೆ ಕೊರೋನಾ ಮಹಾಮಾರಿ ಬಂದು, ಲಾಕ್ಡೌನ್ ಆದಾಗ ಈ ಪರಿಸ್ಥಿತಿ ಒಂದೆ ರಾತ್ರಿಯಲ್ಲಿ ತಲೆಕೆಳಗಾಗಿ ಹೋಯಿತು. ಎಲ್ಲರಿಗೂ ಲಾಕ್ ಡೌನ್ ಇದ್ದರೂ ಇವರು ಕೆಲಸಕ್ಕೆ ಬರಲೇ ಬೇಕಾದ ಅನಿವಾರ್ಯ. ಹಾಗೆ ಬಂದು ಹೋಗಲು ಈಗೇನು ಸಾರ್ವಜನಿಕ ವಾಹನಗಳುಂಟೇ? ಮನೆಯಿಂದ ಪ್ರತಿದಿನ ಮೂರು ಕಿ.ಮೀ ನಡೆದೇ ಕೆಲಸಕ್ಕೆ ಬರಬೇಕಿತ್ತು. ನಡೆದು ಬಂದು ಸಾಕಾಗಿ ಕಸ ಗುಡಿಸಲು ರಸ್ತೆಗಿಳಿದರೆ ಆ ರಸ್ತೆಯ ಮನೆಯವರೆಲ್ಲರೂ ಇವರನ್ನು ಕಂಡೊಡನೆ ಅಪರಾಧಿಗಳನ್ನು ಕಂಡಂತೆ ಮನೆ ಬಾಗಿಲನ್ನು ಹಾಕಿಕೊಂಡು ಒಳಗೆ ಸೇರಿ ಬಿಡುತ್ತಿದ್ದರು. ಸುಡು ಬೇಸಿಗೆ, ಉರಿ ಬಿಸಿಲು....ಹೊಟ್ಟೆ ಹಸಿದು, ಬಾಯಾರಿ, ತಿಂಡಿ ಕಾಫಿ ಸೇವಿಸೋಣವೆಂದರೆ ಒಂದು ಹೋಟೆಲ್ ಸಹ ಇಲ್ಲ. ಕುಡಿಯುವ ನೀರು ಕೇಳಿದರೂ ಜನ ಬಾಗಿಲೇ ತೆಗೆಯದ ಪರಿಸ್ಥಿತಿ ನಿರ್ಮಾಣವಾಗಿ ಹೋಯಿತು. " ಯಶೋದಮ್ಮ ನಮ್ಮ ಮನೆಯ ಕಾಂಪೌಡ್ ಹಾಗೆ ಗುಡಿಸಿ ಕೊಡು...... ತುಂಬಾ ಗಲೀಜಾಗಿದೆ, ಗುಡಿಸಿದ ಮೇಲೆ ಹೇಳದೆ ಹಾಗೇ ಹೊರಟು ಹೋಗಬೇಡ, ತಿಂಡಿ ಕೊಡ್ತೀನಿ" ಎಂದು ಹೇಳುತ್ತಿದ್ದವರೇ ಈಗ ನಮ್ಮ ಮನೆ ಮುಂದೆ ನಾವೇ ಗುಡಿಸಿ ಕೊಳ್ತೀವಿ, ಈಕಡೆಗೆ ಬರಬೇಡ ಎಂದು ದೂರದಿಂದಲೇ ಹೇಳಿ ಬಾಗಿಲು ಹಾಕಿಕೊಳ್ಳುತ್ತಿದ್ದರು. ಇಂತಹ ಕಠಿಣ ಪರಿಸ್ಥಿತಿಯಲ್ಲೂ, ರಸ್ತೆಯ ಬದಿಯಲ್ಲಿ ಬಿಸಾಡಿರುವ ಉಪಯೋಗಿಸಿ ಬಿಸಾಡಿದ. ಗ್ಲೌಸುಗಳು, ಪಿ.ಪಿ. ಕಿಟ್ಟುಗಳು ಇವುಗಳನ್ನೆಲ್ಲಾ ಬಳಿಯುತ್ತಾ, ಕೆಲಸ ಮುಗಿಸಿ, ನೀರೊಲ್ಲದೆ ಹೊಟ್ಟೆಗಿಲ್ಲದೆ ಮತ್ತೆ ಮೂರು ಕಿ.ಮೀ ನಡೆದು ಮನೆ ಸೇರಿದರೆ , ತಾಯಿ ಬಂದಳು ಎಂದು ಪ್ರೀತಿಯಿಂದ ಬಳಿಸಾರುವ ತನ್ನ ಕರುಳ ಕುಡಿಗಳನ್ನು ಕೈಯಿಂದ ಸಹ ಮುಟ್ಟದೆ, ದೂರ ಕಳುಹಿಸುವ ಅನಿವಾರ್ಯತೆ. ಒಂದೆರಡು ಗಂಟೆ ಬಿಸಿಲಿನಲ್ಲಿ ನಿಂತಿದ್ದು, ಆ ನಂತರ ಬಿಸಿನೀರಿನಲ್ಲಿ ತನ್ನೆಲ್ಲಾ ಬಟ್ಟೆಗಳನ್ನು ನೆನೆಸಿ, ಸ್ನಾನ ಮಾಡಿದ ಮೇಲೆ ಮತ್ತೆ ತನ್ಬ ದಿನಚರಿಯನ್ನು ಆರಂಭಿಸಿದರೂ ತನಗೆ ಎಲ್ಲಿ ಆ ಮಾರಿ ಒಕ್ಕರಿಸಿಬಿಟ್ಟಿದೆಯೋ ಎಂಬ ಅನುಮಾನ ಮನದಲ್ಲಿ ಭೂತದಂತೆ ಕಾಡಿ ಹಿಂಡಿ ಹಿಪ್ಪೆ ಮಾಡುತ್ತಲೇ ಇತ್ತು.
ಝಾಡಮಾಲಿಗಳ ಈ ದಾರುಣ ಸ್ಥಿತಿಗತಿಗಳ ಬಗ್ಗೆ ಮನಗಂಡ ಆ ವಾರ್ಡಿನ ಪಾಲಿಕೆ ಸದಸ್ಯರಾದ 'ದೀಪಾ ನಾಗೇಶ್'ರವರು ತತ್ ಕ್ಷಣಕ್ಕೆ ವಾಟ್ಸ್ಯಾಪ್ ನಲ್ಲಿ ಒಂದು ವಿಡಿಯೋ ಮಾಡಿ ತಮ್ಮ ವಾರ್ಡಿನ ಜನಗಳಿಗೆ ಕಳುಹಿಸಿ, ಇವರ ಕಷ್ಟ ನಷ್ಡಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಟ್ಟರು. ಅದಕ್ಕೆ ಪ್ರತಿಕ್ರಿಯಿಸಿದ ತಮ್ಮ ವಾರ್ಡಿನ ದಯಾವಂತ ಜನರ ಸಹಕಾರದಿಂದ ಇವರಿಗೆ ಕುಡಿಯುವ ನೀರಿನ, ಊಟ ತಿಂಡಿಗಳ ವ್ಯವಸ್ಥೆಯನ್ನು ಮಾಡಿಕೊಟ್ಟರು. ಇವೆಲ್ಲವುಗಳ ನಡುವೆಯೇ ಯಶೋದಮ್ಮನ ಅನುಮಾನ ನಿಜವಾಗಿ ಆಕೆಗೆ ಆ ಹೆಮ್ಮಾರಿ ಸೋಕು ತಗುಲುಯೇ ಬಿಟ್ಟಿತು. ಮೊದಲೇ ಅನಕ್ಷರಸ್ಥೆಯಾದ ಆಕೆಗೆ ಇದರಿಂದ ಜಂಘಾ ಬಲವೇ ಉಡುಗಿ ಹೋಯಿತು. ಆಸ್ಪತ್ರೆಗೆ ಹೊರಡುವಾಗ, "ಮತ್ತೆ ತಾನು ಹಿಂತಿರುಗಿ ಬಂದು ಮಕ್ಕಳ ಮುಖ ನೋಡುತ್ತೇನೆಯೇ"? ಎಂದುಕೊಂಡೇ ಜ್ಞಾನ ಭಾರತಿ ಕ್ಯಾಂಪಸ್ಸಿನಲ್ಲಿರುವ ಕರೋನಾ ಪೀಡಿತರನ್ನು ಉಪಚರಿಸುವ ಆಸ್ಪತ್ರೆಗೆ ದಾಖಲಾದಳು. ( ಈ ಕರ್ಮಚಾರಿಗಳಿಗಾಗಿ ಆ ವಾರ್ಡಿನ ಮುಖ್ಯಸ್ಥರು ಬೆಡ್ಗಳನ್ನು ಕಾಯ್ದಿರಿಸುತ್ತಿದ್ದರು ಎನ್ನುವುದು ಇಲ್ಲಿ ಗಮನಾರ್ಹ. ಏಕೆಂದರೆ ದುಡ್ಡಿದ್ದವನೇ ದೊಡ್ಡಪ್ಪ ಅಲ್ಕವೇ? ಹಣ ಅಧಿಕಾರ ಆಸ್ತಿ ಏನೂ ಇಲ್ಲದ ಈ ಶ್ರಮಜೀವಿಗಳಿಗೆ ಯಾವ ಖಾಸಗಿ ಆಸ್ಪತ್ರೆ ತಾನೆ ಚಿಕಿತ್ಸೆ ನೀಡೀತು?) ಆದರೆ ದೇವರ ನಿಯಮ ಬೇರೆಯೇ ಅಗಿತ್ತು. ಅಸ್ಪತ್ರೆಗೆ ದಾಖಲಾದ ಕೆಲ ದಿನಗಳ ನಂತರ ಆರೋಗ್ಯವಂತೆಯಾಗಿ ಮತ್ತೆ ಮನೆ ಸೇರಿದರು ಯಶೋದಮ್ಮ. ಈಗ ತಾನೇ ತನ್ ಜೊತೆಗಾರರಿಗೆ ಧೈರ್ಯ ತುಂಬುವಂತಾಗಿದ್ದಳು. ನಂತರ ಕರೋನಾ ವಾರಿಯರ್ಸ್ ಗೆ ನಡೆದ ವಾರ್ಡ್ ಮಟ್ಟದ ಸನ್ಮಾನ ಸಭೆಯಲ್ಲಿ ಸನ್ಮಾನವನ್ನು ಸ್ವೀಕರಿಸಿ ಎಲ್ಲರ ಗೌರವಕ್ಕೆ ಪಾತ್ರರಾದಾಗ ತಾವು ಪಟ್ಟ ಕಷ್ಟ ಗೌಣವಾಗಿ ಹೋಯಿತು.....
ಈಗಲೂ ಆಕೆ ಆ ದಿನಗಳನ್ನು ನೆನೆಯುತ್ತಾರೆ. ಪ್ರೀತಿಯಿಂದ ಕಾಣುತ್ತಿದ್ದ ಜನರೇ ಅದೆಷ್ಟು ಬೇಗ ಬದಲಾದರೆಂದು ಅಚ್ಚರಿ ಪಡುತ್ತಾರೆ. ಇಂದಿಗೂ ಸಾಮಾಜಿಕ ಅಂತರ, ಸ್ವಚ್ಛತೆ, ಮುಖಗವುಸನ್ನು ಧರಿಸಿದ ಕರೋನಾ ವಾರಿಯರ್ ಯಶೋದಮ್ಮನನ್ನು ರಾಜಾಜಿನಗರದ ಯಾವುದಾದರೂ ರಸ್ತೆಗಳಲ್ಲಿ ಈಗಲೂ ಕಾಣಬಹುದು.