ನವೆಂಬರ್ ಕಳೆದು ಡಿಸೆಂಬರ್ ತಿಂಗಳು ಕಾಲಿಡುತ್ತಿದ್ದಂತೆ ತರಕಾರಿ ಅಂಗಡಿಗಳಲ್ಲಿ,ತಳ್ಳೋ ಗಾಡಿಗಳಲ್ಲಿ, ರಸ್ತೆ ಬದಿಗಳಲ್ಲಿ ರಾಶಿ ಹಾಕಿದ ಅವರೇಕಾಯಿ ಘಮ ನಮ್ಮ ಮೂಗಿಗೆ ಬಡಿಯದೆ ಇರದು. ಹಬ್ಬದ ದಿನಗಳಲ್ಲಿ ಮೈಗೆಲ್ಲಾ ಎಣ್ಣೆ ಸವರಿಕೊಂಡು, ಒಂದಷ್ಟು ಗಂಟೆ ನೆನೆದು ಅಭ್ಯಂಜನ ಸ್ನಾನ ಮಾಡುವಂತೆಯೇ, ಅವರೆಕಾಯಿ ಕೂಡ ಮುಂಜಾನೆಯ ಮಂಜಿನಲ್ಲಿ ಮಿಂದು, ಮೈಗೆಲ್ಲಾ ಎಣ್ಣೆ ಸವರಿಕೊಂಡು ಮಿರಮಿರನೆ ಮಿಂಚುತ್ತಿರುತ್ತದೆ. ಇಂಥಹ ಅವರೇಕಾಯೇನಾದರೂ ಕಣ್ಣಿಗೆ ಬಿದ್ದರೆ ಕನಿಷ್ಟ ಪಕ್ಷ ಒಂದೆರಡು ಕೆಜಿಗಳನ್ನಾದರೂ ಕೊಳ್ಳದೆ ಇರಲಾದೀತೇ!
ಉಷ್ಣವಲಯದಲ್ಲಿ ಬೆಳೆಯವ ಈ ದ್ವಿದಳ ಧಾನ್ಯದ ಮೂಲ ಆಫ್ರಿಕಾ ಖಂಡವಾದರೂ ಇದು ಆಫ್ರಿಕಾ ಮತ್ತು ಏಷ್ಯಾ ಖಂಡಗಳೆರಡರಲ್ಲೂ ಅತ್ಯಂತ ಜನಪ್ರಿಯತೆಯನ್ನು ಗಳಿಸಿಕೊಂಡಿದೆ. ದಕ್ಷಿಣ ಭಾರತದಲ್ಲಿ ಅದರಲ್ಲೂ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣಗಳಲ್ಲಿ ಇದು ಜನಪ್ರಿಯತೆಯ ಶಿಖರವನ್ನೇರಿದೆ. ಡಿಸೆಂಬರ್, ಜನವರಿ ಮತ್ತು ಫೆಬ್ರವರಿ ತಿಂಗಳುಗಳಲ್ಲಿ ಇದನ್ನು ಬಿಟ್ಟು ಇತರೇ ತರಕಾರಿಗಳು ರುಚಿಸವು. ಗಂಟೆಗಟ್ಟಲೆ ಕುಳಿತು ಸೊಂಟ ನೋಯಿಸಿಕೊಂಡು ಅವರೆಕಾಯಿಯನ್ನು ಸುಲಿಯುವ ಮತ್ತು ಹಿತಕುವ ಪ್ರಕ್ರಿಯೆ ಸ್ವಲ್ಪಮಟ್ಟಿಗೆ ಪ್ರಯಾಸದಾಯಕವಾಗಿದ್ದರೂ, ಅದನ್ನು ತಿನ್ನುವಾಗ ಸಿಗುವ ತೃಪ್ತಿಯ ಮುಂದೆ ಈ ಪ್ರಯಾಸವೂ ಹಿತಕರವೇ. ಬೇರೆ ತರಕಾರಿಗಳ ಅಡುಗೆ ಮಾಡುವಾಗ ಅಡುಗೆ ಮನೆಯತ್ತ ತಿರುಗಿಯೂ ನೋಡದ ಮನೆಯ ಇತರ ಸದಸ್ಯರು ಅವರೇಕಾಯಿ ಸುಲಿಯುವ, ಹಿತಕುವ ಕೆಲಸದಲ್ಲಿ ಮಾತ್ರ ಸಕ್ರಿಯವಾಗಿ ಭಾಗವಹಿಸುತ್ತಾರೆ. ಆ ಮೂಲಕ ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ಕುಳಿತು ಮಾತುಕತೆಯಾಡಲು ಇದೊಂದು ಸುಸಂದರ್ಭವನ್ನು ಒದಗಿಸಿ ಕೊಡುತ್ತದೆ. ಕೆಲವೊಮ್ಮೆ ಅಕ್ಕಪಕ್ಕದ ಮನೆಗಳ ಮಹಿಳಾ ಮಣಿಗಳು ಅವರೆಕಾಯಿ ಸುಲಿಯುವ ನೆಪದಲ್ಲಿ ಗುಂಪುಗೂಡಿ, ಕಷ್ಟ ಸುಖಗಳನ್ನು ಹಂಚಿಕೊಳ್ಳುವುದರಿಂದ ಸ್ನೇಹ ಸೌಹಾರ್ದತೆಗಿದು ದಾರಿ ಮಾಡಿಕೊಡುತ್ತದೆ.
ಅವರೇಕಾಯಿಯನ್ನು
ಕಾಮಧೇನು, ಕಲ್ಪವೃಕ್ಷಗಳಿಗೂ ಸಹ ಹೋಲಿಸಬಹುದಾಗಿದೆ. ಏಕೆಂದರೆ ಇದರ ಸೊಪ್ಪು, ಹೂವು, ಕಾಳುಗಳಷ್ಟೇ ಅಲ್ಲದೆ ಸಿಪ್ಪೆಗಳೂ ಸಹ ವ್ಯರ್ಥವಾಗುವುದಿಲ್ಲ. ಅವರೇಕಾಯಿಯ ಸಿಪ್ಪೆಯು ಜಾನುವಾರುಗಳಿಗೆ ಉತ್ತಮ ಮೇವಾಗಿ ಉಪಯೋಗಿಸಲ್ಪಡುತ್ತದೆ.
ನನ್ನಮ್ಮನಂತೂ ಯಾವುದಕ್ಕೆ ಹಣವಿಲ್ಲದಿದ್ದರೂ ಕೇಜಿಗಟ್ಟಲೆ ಅವರೇಕಾಯನ್ನು ತಂದು, ಒಬ್ಬಳೇ ಕೂತಿ ಸುಲಿದು, ಎಳೆಕಾಳುಗಳನ್ನು, ಬಲಿತಿರುವ ಕಾಳುಗಳನ್ನು ಬೇರೆಬೇರೆಯಾಗಿಸಿಡುತ್ತಿದ್ದಳು. ಎಳೇ ಕಾಳುಗಳನ್ನು, ಉಪಿಟ್ಟಿಗೆ, ಅಕ್ಕಿ ರೊಟ್ಟಿಗೆ, ಉಸಲಿಗೆ ಮತ್ತು ಕಾಳು ಹುಳಿಗೆಂದು ಪ್ರತ್ಯೇಕವಾಗಿ ಇಡುತ್ತಿದ್ದಳು. ಎಳೆಕಾಳುಗಳನ್ನು ಬೇಯಿಸುವಾಗ ನನಗಾಗಿ ತಪ್ಪದೆ ಒಂದು ಬಟ್ಟಲು ಉಪ್ಪು ಹಾಕಿ ಬೇಯಿಸಿದ ಕಾಳುಗಳನ್ನು ತೆಗೆದಿರಿಸಬೇಕೆಂಬ ಗೋಲ್ಡನ್ ರೂಲ್ಸ್ ಬೇರೆ. ಏಕೆಂದರೆ ಅವರೇ ಕಾಯಿ ಎಂದರೆ ನನಗೆ ಪಂಚ ಪ್ರಾಣ. ಹಿತಕಿದ ಬೇಳೆ ಸಾಂಬಾರನ್ನು ದಿಢೀರ್ ಎಂದು ಮಾಡಲಾಗದು ಅದಕ್ಕೆ ಪೂರ್ವ ತಯಾರಿ ಅತ್ಯಗತ್ಯ. ಹಿಂದಿನ ದಿನ ಸಂಜೆಗೆ ಅವರೇಕಾಳುಗಳನ್ನು ಬಿಡಿಸಿ, ಅದರಲ್ಲಿ ಬಲಿತಿರುವ ಕಾಳುಗಳನ್ನು ಆರಿಸಿ, ಅವುಗಳನ್ನು ನೀರಿನಲ್ಲಿ ನೆನೆಸಬೇಕು. ಸುಮಾರು ನಾಲ್ಕರಿಂದ ಆರು ಗಂಟೆಗಳ ಕಾಲ ನೆನೆದ ಮೇಲೆ ಈ ಕಾಳುಗಳು ಹಿತಕಲು ಸಿದ್ಧವಾಗಿರುತ್ತವೆ. ಕಾಳುಗಳನ್ನು ಹಿತಕುವುದು ಕೂಡ ಒಂದು ಕಲೆ. ಒಂದು ಕೈಯಲ್ಲಿ ಹಿತಕುವುದು ಸಲೀಸು. ನನ್ನಮ್ಮನೇನೋ ಬಲಿತ ಕಾಳುಗಳನ್ನು ನೀರಿನಲ್ಲಿ ರಾತ್ರಿಯಿಡೀ ನೆನೆ ಹಾಕಿ, ಬೆಳಗಾಗೆದ್ದು ಒಬ್ಬಳೇ ಹಿತುಕಲು ಆರಂಭಿಸುತ್ತಿದ್ದಳು. ಎಡಗೈ, ಬಲಗೈಗಳು ಗುಂಡಿಯೊತ್ತಿದ ಯಂತ್ರದಂತೆ ಒಂದಾದ ಮೇಲೊಂದು ಬಟ್ಟಲಿನಲ್ಲಿ ಕಾಳುಗಳನ್ನು ಹಿತಕುವುದನ್ನು ನೋಡುವುದೇ ಒಂದು ಸಂತೋಷ. ಕೆಲವೊಮ್ಮೆ ಚೆನ್ನಾಗಿ ಬಲಿತ ಕಾಳನ್ನು ಹಿತುಕಿದಾಗ ಅಚಾನಕ್ಕಾಗಿ ಕೈಯಿಂದ ಜಾರಿ, ಮನೆಯ ಯಾವುದೋ ಮೂಲೆಗೆ ಹಾರಿ ಅಡಗಿಕೊಳ್ಳುತ್ತಿತ್ತು. ಇಂತಹ ಕಾಳುಗಳನ್ನೂ ಬಿಡದೆ, ಕೊನೆಯಲ್ಲಿ ಆರಿಸಿ ತೊಳೆದು ಉಪಯೋಗಿಸುತ್ತಿದ್ದಳು. ಹಿತಕಿದ ಬೇಳೆಯನ್ನು ಕರಿದು ಗರಿಗರಿಯಾದ ಖಾದ್ಯವನ್ನೂ ತಯಾರಿಸಿಡುತ್ತಿದ್ದಳು. ನನ್ನ ಸ್ನೇಹಿತರಿಗೆಲ್ಲಾ ಇದು ಅಚ್ಚುಮೆಚ್ಚು. ಅವರೇ ಕಾಳಿನಿಂದ ಸಾರು,ಉಸಲಿ, ರೊಟ್ಟಿ, ಉಪ್ಪಿಟ್ಟು, ಬಸ್ಸಾರು, ಉಪ್ಸಾರು, ಪಲ್ಯ, ತೊವ್ವೆ, ಬಿಸಿಬೇಳೆ ಬಾತ್, ಪೊಂಗಲ್, ಕೊನೆಗೆ ಇಡ್ಲಿ, ದೋಸೆಗಳನ್ನೂ ತಯಾರಿಸುತ್ತಿದ್ದಳು.
ತರಕಾರಿ ಸಾಂಬರ್, ಪುಲಾವ್, ಸಾಗೂ ಮುಂತಾದ ಅಡುಗೆಗಳಲ್ಲಿ ಕೂಡ ತರಕಾರಿಗಳೊಂದಿಗೆ ಬಳಸಲ್ಪಡುತ್ತಿತ್ತು.
ಬೆಂಗಳೂರು ಮತ್ತಿತರ ನಗರ ಪ್ರದೇಶಗಳಲ್ಲಿ ಪ್ರತೀ ವರ್ಷ 'ಅವರೇ ಮೇಳ' ನಡೆದು ಸಹಸ್ರಾರು ಸಂಖ್ಯೆಯಲ್ಲಿ ರಸಿಕರನ್ನು ತನ್ನೆಡೆಗೆ ಬರಸೆಳೆಯುತ್ತದೆ. ಈ ಮೇಳಗಳಲ್ಲಂತೂ ನಾವು ಕಂಡು ಕೇಳರಿಯದ ವೈವೀಧ್ಯಮಯ ಅವರೇ ಕಾಳಿನ ಖಾದ್ಯಗಳನ್ನು ಕಾಣಬಹುದು.ಅವರೇ ಕಾಳಿನ ಹೋಳಿಗೆ, ಅವರೇ ಕಾಳಿನ ವಡೆ, ಅವರೇ ಕಾಳು ಪಾಯಸ, ಅವರೇ ಕಾಳಿನ ಬರ್ಫಿ, ಅವರೇ ಕಾಳಿನ ಕುರ್ಮಾ, ಅವರೇ ಕಾಳಿನ ಚಟ್ನಿ,ಅವರೇ ಕಾಳಿನ ಕಜ್ಜಾಯ, ಅವರೇ ಕಾಳಿನ ಮಂಚೂರಿ ಹೀಗೆ ಬಗೆ ಬಗೆಯ ಖಾದ್ಯಗಳನ್ನು ತಯಾರಿಸಿ, ಭೋಜನ ಪ್ರಿಯರ ನಾಲಿಗೆ ತಣಿಯುವಂತೆ ಮಾಡುತ್ತಾರೆ. ವಿವಿ ಪುರಂನಲ್ಲಿರುವ ಫುಡ್ ಸ್ಟ್ರೀಟಿನಲ್ಲಂತೂ ಅವರೇ ಕಾಳಿಗೆ ರಾಜ ಮರ್ಯಾದೆ. ಅವರೇ ಕಾಳು ಹಾಕಿದ ದೋಸೆಗಂತೂ ಎಲ್ಲಿಲ್ಲದ ಡಿಮ್ಯಾಂಡು. ಜನ ಗಂಟೆಗಟ್ಟಲೆ ದೋಸೆ ಅಂಗಡಿಗಳ ಮುಂದೆ ನಿಂತು ಅವರೇಬೇಳೆ ದೋಸೆಗೆ ಮುಗಿಬೀಳುವುದನ್ನು ಕಣ್ಣಾರೆ ಕಂಡಿದ್ದೇನೆ.
ಆದಾಗ್ಯೂ ಬಿಸಿ ಬಿಸಿ ರಾಗಿ ಮುದ್ದೆಗೆ ಕಾಳಿನ ಹುಳಿಯಿದ್ದರೆ ಸ್ವರ್ಗಕ್ಕೆ ಮೂರೇ ಗೇಣು.ರಟ್ಟೆ ಮುರಿಯುವಂತೆ ದುಡಿದು ಬಂದ ಕೃಷಿಕನಿಗೆ ಮುದ್ದೆ ಜೊತೆಗೆ ಅವರೆಕಾಳಿನ ಬಸ್ಸಾರೋ, ಉಪ್ಪು ಸಾರೋ ಇದ್ದರಂತೂ ಮುಗಿದೇ ಹೋಯಿತು ಮತ್ತೇನೂ ಬೇಕೆಂಬ ಆಸೆ ಮೂಡದ ರೀತಿಯಲ್ಲಿ ತೃಪ್ತಿ ಪಡಿಸುತ್ತದೆ. ಮುದ್ದೆ, ಅನ್ನ, ಚಪಾತಿ ಪೂರಿ, ರೊಟ್ಟಿ ಹೀಗೆ ಎಲ್ಲದರ ಜೊತೆ ಬೆರೆಯುವ, ಹೊಂದಿಕೊಳ್ಳುವ ಕಲೆಗಾರಿಕೆ, ನಯಗಾರಿಕೆಯಿರುವ ಈ ಕಾಳು ಮಾನವನಂತೆ ಸ್ನೇಹ ಜೀವಿ ಯಾರೊಡನೆಯೂ ಬಿಗಮಾನವಿಲ್ಲದೆ, ಕಲಹವಿಲ್ಲದೆ, ಮನಸ್ತಾಪಗಳಿಗೆ ಎಡೆ ಮಾಡಿಕೊಡದೆ ಹೊಂದಿಕೊಳ್ಳುವ ಸ್ವಭಾವ ಇದಕ್ಕಿದೆ.
ಬೆಂಗಳೂರಿನಂತಹ ಮಹಾನಗರಗಳಲ್ಲಿ ಉದ್ಯೋಗಸ್ಥ ಮಹಿಳೆಯರೇ ಹೆಚ್ಚು. ಅವರಿಗೆ ಅವರೇಕಾಯನ್ನು ಅಂಗಡಿಯಿಂದ ತಂದು, ಸುಲಿಯಲು ಸಮಯವಾಗಲಿ ಹಿತಕಲು ವ್ಯವಧಾನವಾಗಲಿ ಇರುವುದಿಲ್ಲ. ಹಾಗೆಂದು ಅವರೇಕಾಳನ್ನು ತಿನ್ನದೆ ಇರಲಾದೀತೇ! ಅದಕ್ಕಾಗಿಯೇ ತರಕಾರಿ ಅಂಗಡಿಗಳಲ್ಲಿ ಸುಲಿದ ಅವರೆಕಾಳನ್ನು, ಹಿತಕಿದ ಅವರೆಯನ್ನು ಸೇರು, ಪಾವು, ಚಟಾಕಿನ ಲೆಕ್ಕದಲ್ಲಿ ಮಾರಲಾಗುತ್ತದೆ. ಅವರೆಕಾಯಿಯ ಬೆಲೆಗೆ ಹೋಲಿಸಿದರೆ ಇದು ಸ್ವಲ್ಪ ದುಬಾರಿಯೆಂದೆನಿಸಿದರೂ "ಅವರೆಕಾಯಿಯನ್ನು ತಿನ್ನಲಾಗಲಿಲ್ಲವಲ್ಲ!" ಎಂಬ ಚಿಂತೆ ಇರುವುದಿಲ್ಲವಷ್ಟೆ!
ಅವರೇಕಾಯಿ ಕೇವಲ ನಾಲಿಗೆ ರುಚಿಗೆ ಮಾತ್ರ, ಇದರಿಂದ ಆರೋಗ್ಯಕ್ಕೆ ಯಾವುದೇ ಪ್ರಯೋಜನವಿಲ್ಲ, ವಾಯು ಎಂದೆಲ್ಲಾ ಮೂಗುಮುರಿಯಬೇಡಿ. ಏಕೆಂದರೆ ಅವರೇಕಾಳಿನಲ್ಲಿ ಪ್ರೋಟೀನ್, ಕಬ್ಬಿಣ, ಮೆಗ್ನೀಷಿಯಂ ಮತ್ತು ಸತು ಯಥೇಚ್ಛವಾಗಿದೆ ಇದರಲ್ಲಿ ನಾರಿನ ಅಂಶವಿರುವುದರಿಂದ ಪಚನ ಕ್ರಿಯೆಯೂ ಸುಲಭ. ಬಿ ಮತ್ತು ಸಿ ಅನ್ನಾಂಗಗಳನ್ನು ಒಳಗೊಂಡಿದ್ದು, ಕೊಬ್ಬಿನ ಅಂಶ ಕಡಿಮೆ ಇರುವುದರಿಂದ ಹೃದ್ರೋಗಿಗಳೂ ಕೂಡ ಇದನ್ನು ಸವಿದು ಆನಂದಿಸಬಹುದಾಗಿದೆ. ಶ್ವಾಸಕೋಶವನ್ನು ಆರೋಗ್ಯವಾಗಿಡುವಲ್ಲಿ, ಮೆದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುವಲ್ಲಿ, ಕ್ಯಾನ್ಸರ್ ಕಾಯಿಲೆ ಬರದಂತೆ ತಡೆಗಟ್ಟುವಲ್ಲಿ, ಮೂಳೆಗಳ ಸಾಂದ್ರತೆಯನ್ನು ಹೆಚ್ಚಿಸುವಲ್ಲಿ ಇದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಚಳಿಗಾಲದಲ್ಲಿ ದೇಹದ ಉಷ್ಣಾಂಶವನ್ನು ಕಾಯ್ದಿಡುವುದರಲ್ಲಿಯೂ ಪ್ರಮುಖ ಪಾತ್ರವನ್ನು ವಹಿಸುವುದರಿಂದ ಯಾವುದೇ ವಯಸ್ಸಿನ ತಾರತಮ್ಯವಿಲ್ಲದೆ ಚಿಕ್ಕ ಮಕ್ಕಳಿಂದ ಮುದುಕರವರೆಗೂ ಇದನ್ನು ಸೇವಿಸಬಹುದು. ಸಭೆ ಸಮಾರಂಭಗಳಲ್ಲಿ ಇದರ ಖಾದ್ಯಗಳನ್ನು ಮಾಡಿಸುವುದು ಪ್ರತಿಷ್ಠೆಯ ವಿಷಯವಾಗುತ್ತದೆ.
'ಮಕರ ಸಂಕ್ರಾಂತಿ' ರೈತರಿಗೆ ಸುಗ್ಗಿಯ ಹಬ್ಬ. ಈ ದಿನ ಕೈಗೆ ಬಂದಿರುವ ಫಸಲನ್ನು, ಭೂತಾಯಿಯನ್ನು, ಉಳುಮೆಗೆ ಸಹಕರಿಸಿದ ಜಾನುವಾರುಗಳನ್ನು ಪೂಜಿಸುವುದು ವಿಶೇಷ. ಈ ಹಬ್ಬದಂದು ಹೊಸದಾಗಿ ಕೈಗೆ ಬಂದ ಫಸಲುಗಳಾದ ಅವರೇಕಾಯಿ, ಗೆಣಸು, ಕಡಲೆಕಾಯಿಗಳನ್ನು ಬೇಯಿಸಿ, ದೇವರಿಗೆ ನೈವೇದ್ಯವನ್ನು ಅರ್ಪಿಸುತ್ತಾರೆ.ಒಂದರ್ಥದಲ್ಲಿ ದೇವರಿಗೂ ಅವರೆಕಾಯಿ ಪ್ರಿಯವೇ ಅಲ್ಲವೇ! ಇಷ್ಟೇ ಅಲ್ಲದೆ ಹಸು, ಎತ್ತುಗಳಿಗೆ ಪೋಣಿಸಿದ ಅವರೇಕಾಯಿ ಹಾರವನ್ನು ಹಾಕಿ ಸಿಂಗರಿಸುತ್ತಾರೆ.
ಅವರೆಕಾಯಿಯ ಬಲಿತ ಕಾಳುಗಳನ್ನು ಒಣಗಿಸಿ, ಒಣ ಅವರೇಕಾಳುಗಳನ್ನಾಗಿ ಮಾಡಲಾಗುತ್ತದೆ. ಈ ಕಾಳುಗಳನ್ನು ಒಡೆದು, ಅವರೇ ಬೇಳೆಯನ್ನಾಗಿಯೂ ಪರಿವರ್ತಿಸಲಾಗುತ್ತದೆ. ಕೆಲವೊಂದು ಮನೆಗಳಲ್ಲಿ ಹಿತಕಿದ ಕಾಳುಗಳನ್ನು ಬಿಸಿಲಲ್ಲಿ ಒಣಗಿಸಿ ಶೇಖರಿಸಿಡುವ ಪರಿಪಾಠವೂ ಇದೆ. ಏಕೆಂದರೆ ಇದು ಎಲ್ಲ ಕಾಲಗಳಲ್ಲೂ ಅಲಭ್ಯ. ಅಕಸ್ಮಾತ್ ಅಕಾಲದಲ್ಲಿ ಅವರೆಯ ರುಚಿ ಸವಿಯಬೇಕೆನಿಸಿದರೆ ಒಣಗಿದ ಹಿತಕವರೆ ಕಾಳುಗಳನ್ನು ನೀರಿನಲ್ಲಿ ಒಂದು ಗಂಟೆ ನೆನೆಸಿದರೆ ಸಾಕು, ತಾಜಾ ಕಾಳುಗಳು ಅಡುಗೆಗೆ ಸಿದ್ಧ. ಸೊನೆ ಇರದ ಈ ಕಾಳುಗಳು ಅಷ್ಟು ರುಚಿಸದಿದ್ದರೂ ಹಿತಕವರೇ ಸಾರು ತಿಂದೆವೆಂಬ ಸಂತೋಷವನ್ನು ನೀಡಬಲ್ಲದು.
ಈ ಅವರೇ ಕಾಳುಗಳಿಗೂ ಬೆಂಗಳೂರಿಗೂ ಒಂದು ಅವಿನಾಭಾವ ಸಂಬಂಧವಿದೆ.
ಒಮ್ಮೆ ಬೆಂಗಳೂರಿನ ನಿರ್ಮಾತೃ, ನಾಡಪ್ರಭುಗಳೂ ಆದ ಕೆಂಪೇಗೌಡರು ಕುದುರೆ ಏರಿ ಹೊರಟರು. ಕಾಡಿನಲ್ಲಿ ದಾರಿತಪ್ಪಿ, ಹಸಿವು ಬಾಯಾರಿಕೆಯಿಂದ ಬಳಲುತ್ತಾ ಸಾಗುತ್ತಿದ್ದಾಗ ದೂರದಲ್ಲಿ ಒಂದು ಗುಡಿಸಲು ಕಣ್ಣಿಗೆ ಬಿತ್ತು. ಅದರ ಬಳಿಸಾರಿದ ಪ್ರಭುಗಳು, ಕುದುರೆಯಿಂದಿಳಿದು, ಗುಡಿಸಲಿನ ಬಾಗಿಲಿಗೆ ಬಂದು, " ಯಾರಿದ್ದೀರಿ ಒಳಗೆ? ನಮಗೆ ಬಹಳ ಹಸಿವಾಗುತ್ತಿದೆ. ತಿನ್ನಲು ಏನಾದರೂ ಇದ್ದಲ್ಲಿ ದಯಮಾಡಿ ನೀಡಿ" ಎಂದು ವಿನಯದಿಂದ ಕೇಳಿಕೊಂಡರು. ಒಳಗೆ ಅಡುಗೆ ಮಾಡುತ್ತಿದ್ದ ಮುದುಕಿಯೊಬ್ಬಳು, ಅಡುಗೆ ಇನ್ನು ಆಗಬೇಕೆಂದೂ, ಸಾರು ಮಾಡಲು ಕಾಳುಗಳನ್ನು ಬೇಯಿಸಿರುವುದಾಗಿಯೂ, ಕೆಲ ಕಾಲ ಕಾದರೆ ಅಡುಗೆ ಸಿದ್ಧವಾಗುವುದೆಂದೂ ತಿಳಿಸಿದಳು. ಪ್ರಭುಗಳಿಗೆ ಹಸಿವು ತಡೆಯದಾಗಿತ್ತು. ಅವರು ಈ ತತ್ತಕ್ಷಣದಲ್ಲಿ ಏನಾದರೂ ನೀಡಬೇಕೆಂದು,ಬಹಳ ಹಸಿವಾಗುತ್ತಿದೆಯೆಂದೂ ಮತ್ತೆ ಹೇಳಿದಾಗ, ಆ ಮುದುಕಿ ಒಂದು ಮಣ್ಣಿನ ಸಾವೆಯ ತುಂಬಾ ಉಪ್ಪು ಹಾಕಿ ಬೇಯಿಸಿದ ಅವರೆಕಾಳುಗಳನ್ನು ತಂದು ಪ್ರಭುಗಳಿಗೆ ನೀಡಿದಳು. ಹಸಿವಿನಿಂದ ಕಂಗೆಟ್ಟಿದ್ದ ಪ್ರಭುಗಳು ಆ ಕಾಳುಗಳನ್ನು ತಿಂದಾಗ ಅದು ಅಮೃತಕ್ಕಿಂತಲೂ ರುಚಿಯೆನಿಸಿತು. ಅಷ್ಟು ಚೆನ್ನಾಗಿ ಬೆಂದ ಕಾಳುಗಳ ಪ್ರದೇಶವನ್ನು 'ಬೆಂದಕಾಳೂರು' ಎಂದು ಕರೆದರು. ಈ ಸ್ಥಳವೇ ಮುಂದೆ ಬೆಂಗಳೂರಾಗಿ ಪ್ರಸಿದ್ಧಿಯನ್ನು ಪಡೆಯಿತು. ಬ್ರಿಟಿಷರ ಆಳ್ವಿಕೆಯಲ್ಲಿ ಬ್ಯಾಂಗಲೋರ್ ಆಗಿದ್ದು, ಪ್ರಸ್ತುತ 'ಬೆಂಗಳೂರು' ಎಂದೆನಿಸಿಕೊಂಡಿದೆ. ಒಟ್ಟಿನಲ್ಲಿ ಈ ಅವರೆಕಾಳನ್ನು ರಾಜರಿಂದ ಹಿಡಿದು ಜನಸಾಮಾನ್ಯರವರೆಗೂ ಇಷ್ಟಪಡದವರೇ ಇಲ್ಲ ಎಂದರೆ ತಪ್ಪಾಗಲಾರದು.
ಅವರೆಕಾಯಿ ಕೆಲಮಟ್ಟಿಗೆ ವಾಯುವಿನ ಅಂಶವನ್ನು ಒಳಗೊಂಡಿದೆ. ಕೆಲವರ ದೇಹದಲ್ಲಿ ವಾತವನ್ನು ಹೆಚ್ಚಿಸುತ್ತದೆ. ಅಸಿಡಿಟಿ ಸಮಸ್ಯೆಗೆ ಕಾರಣವಾಗುತ್ತದೆ. ಹಾಗಂತ ಇದನ್ನು ತಿನ್ನದೆ ಕೆಟ್ಟವರು ಉಂಟೇ! ಇದಕ್ಕೆಂದೇ ಅವರೆಕಾಯಿ ಅಡುಗೆಯನ್ನು ಮಾಡುವಾಗ ಇಂಗು, ಬೆಳ್ಳುಳ್ಳಿ ಹಾಗೂ ಶುಂಠಿಗಳನ್ನು ಖಡಾಖಂಡಿತವಾಗಿ ಬಳಸಲಾಗುತ್ತದೆ. ಈ ಒಂದು ದೋಷದ ಹೊರತಾಗಿ ಉಳಿದೆಲ್ಲಾ ಉತ್ತಮ ಅಂಶಗಳನ್ನು ಒಳಗೊಂಡಿರುವುದರಿಂದ ಇದು ಸರ್ವಕಾಲಿಕ, ಸರ್ವಮಾನ್ಯ ತರಕಾರಿ ಎನ್ನುವುದರಲ್ಲಿ ಎರಡು ಮಾತಿಲ್ಲ.
ಇತ್ತೀಚಿನ ದಿನಗಳಲ್ಲಿ ಕೇವಲ ಡಿಸೆಂಬರ್, ಜನವರಿ ತಿಂಗಳುಗಳಲ್ಲಿ ಮಾತ್ರವಲ್ಲದೆ, ವರ್ಷದ ಎಲ್ಲಾ ತಿಂಗಳುಗಳಲ್ಲಿಯೂ ಅವರೆಕಾಳು, ಅವರೆಕಾಯಿ ಕಾಣಸಿಗುತ್ತದೆಯಾದರೂ ಅವು ಅಷ್ಟು ಸೊಗಡಾಗಲಿ, ರುಚಿಯಾಗಲಿ ಇರುವುದಿಲ್ಲ. ಬರೀ ಬಾಯಿಚಪಲಕ್ಕೆ ಇದನ್ನು ತಿನ್ನಬೇಕೆ ಹೊರತು, ಅವರೆಕಾಯಿಯ ನಿಜವಾದ ಸ್ವಾದ ಅರಿವಿಗೆ ಬರುವುದು ಈ ತಿಂಗಳುಗಳಲ್ಲಿಯೇ. ಏಕೆಂದರೆ ಹಿಮ ಬಿದ್ದ ಅವರೆಕಾಯಿ ಹೆಚ್ಚು ಸೊಗಡಿಯಿಂದ ಕೂಡಿರುತ್ತದೆ. ಹೊಲಗಳಲ್ಲಿ ಮೈ ಚಾಚಿ ಮಲಗಿರುವ ಈ ಬಳ್ಳಿಗಳು ತಮ್ಮ ಮೈತುಂಬ ಕಾಯಿಗಳನ್ನು ತಳೆದು ನಳನಳಿಸುತ್ತಿರುತ್ತವೆ. ಕೆಲವೊಮ್ಮೆ ಅವರೆಯ ಸೊಗಡು ಎಷ್ಟಿರುತ್ತದೆಯೆಂದರೆ ಅದನ್ನು ಗಿಡಗಳಿಂದ ಬಿಡಿಸುವಾಗ, ಸುಲಿಯುವಾಗ ಮೈ ಕೈಯೆಲ್ಲವೂ ನವೆಯಾಗತೊಡಗುತ್ತವೆ. ಈ ಗಿಡಗಳಲ್ಲಿ ಕಾಯಿ ಕೊರೆಯುವ ಹುಳು ಅಂದರೆ ಆಡು ಭಾಷೆಯಲ್ಲಿ ಅವರೇ ಕಾಯಿ ಹುಳುಗಳಿದ್ದು, ಕಾಳುಗಳನ್ನು ಸೋಸುವಾಗ ಎಚ್ಚರಿಕೆಯಿಂದಿರುವುದು ಅಗತ್ಯ.