ವಾರ್ಷಿಕ ಪರೀಕ್ಷಾ ಸಿದ್ಧತೆ ಮತ್ತು ಸಲಹೆಗಳು | Jnana Kirana

Annual Exam Preparation: Useful Study Tips for Students

ಪರಿಹರಿಸಿದ ಪ್ರಶ್ನೆ ಪತ್ರಿಕೆಗಳು ಆಗಸ್ಟ್ 29, 2026 3 ನಿಮಿಷ ಓದು
ವಾರ್ಷಿಕ ಪರೀಕ್ಷಾ ಸಿದ್ಧತೆ ಮತ್ತು ಸಲಹೆಗಳು | Jnana Kirana
ಸಾರಾಂಶ (Summary)

ವಾರ್ಷಿಕ ಪರೀಕ್ಷೆಯ ಆತಂಕ ನಿವಾರಿಸಿ ಉತ್ತಮ ಫಲಿತಾಂಶ ಪಡೆಯಲು ವಿದ್ಯಾರ್ಥಿಗಳಿಗೆ ಅಗತ್ಯವಿರುವ ಸರಳ ಅಧ್ಯಯನ ಸಲಹೆಗಳು ಮತ್ತು ವೇಳಾಪಟ್ಟಿ ಸಿದ್ಧತೆಯ ವಿವರಗಳು ಇಲ್ಲಿದೆ.

ಫೆಬ್ರವರಿ, ಮಾರ್ಚ್ ತಿಂಗಳುಗಳು ಬಂತೆಂದರೆ ಪ್ರತಿ ಮನೆಯಲ್ಲೂ ಒಂದು ರೀತಿಯ ಆತಂಕ, ಗಡಿಬಿಡಿ ಮನೆಮಾಡುತ್ತದೆ ಇದಕ್ಕೆ ಮುಖ್ಯ ಕಾರಣ ವಾರ್ಷಿಕ ಪರೀಕ್ಷೆಗಳು. ವಿದ್ಯಾರ್ಥಿಗಳಿಗೆ ವರ್ಷವಿಡೀ ಘಟಕ ಪರೀಕ್ಷೆಗಳು ಮಾಸಿಕ ಪರೀಕ್ಷೆಗಳು ಮೌಖಿಕ ಪರೀಕ್ಷೆಗಳು ನಡೆಯುತ್ತಿದ್ದರೂ ವಾರ್ಷಿಕ ಪರೀಕ್ಷೆ ಮಹತ್ವವೆನಿಸುತ್ತದೆ. ಏಕೆಂದರೆ ಈ ಪರೀಕ್ಷೆ ಮುಂದಿನ ತರಗತಿಗಳಿಗೆ ಹೋಗುವುದರಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.

ವಿದ್ಯಾರ್ಥಿಗಳು ತಾವು ಎಷ್ಟೇ ಓದಿ ತಯಾರಿ ನಡೆಸಿದ್ದರೂ ಪರೀಕ್ಷೆ ಹತ್ತಿರ ಬರುತ್ತಿದ್ದಂತೆಯೇ ಮಾನಸಿಕ ಒತ್ತಡಕ್ಕೆ ಗುರಿಯಾಗುತ್ತಾರೆ. ಒಂದು ಕಡೆ ಪೋಷಕರು ಮತ್ತೊಂದು ಕಡೆ ಶಿಕ್ಷಕರ, ಅಧ್ಯಾಪಕರ, ಮಗದೊಂದು ಕಡೆ ನೆಂಟರಿಷ್ಟರ ನಿರೀಕ್ಷೆಯ ಮಟ್ಟವನ್ನು ತಲುಪಬಲ್ಲೆನೇ ಎಂಬ ಸಂದೇಹಕ್ಕೀಡಾಗಿ ಆತಂಕಕ್ಕೆ ಒಳಗಾಗುತ್ತಾರೆ. ಇಂತಹ ಮಾನಸಿಕ ಒತ್ತಡವನ್ನು, ಪರೀಕ್ಷಾ ಆತಂಕವನ್ನು ನಿವಾರಿಸಿಕೊಂಡು, ಉತ್ತಮ ಫಲಿತಾಂಶವನ್ನು ಪಡೆಯಲು ವಿದ್ಯಾರ್ಥಿಗಳು ಕೆಲವು ಸರಳೋಪಾಯಗಳನ್ನು ರೂಢಿಸಿಕೊಳ್ಳುವುದು ಅತ್ಯಂತ ಅವಶ್ಯಕ.

ವಾರ್ಷಿಕ ಪರೀಕ್ಷೆಗೆ ಇನ್ನೆರಡೇ ತಿಂಗಳುಗಳು ಬಾಕಿ ಉಳಿದಿರುವುದರಿಂದ ಇರುವ ಸ್ವಲ್ಪ ಸಮಯವನ್ನೇ ಸರಿಯಾಗಿ ಸದುಪಯೋಗ ಪಡಿಸಿಕೊಳ್ಳುವುದಕ್ಕೆ ಕೆಲವು ಉಪಯುಕ್ತ ಚಿಟಿಕೆಗಳನ್ನು ಗಮನಿಸಿ.

  • ದಿನದ 24 ಗಂಟೆಗಳಲ್ಲಿ ಲಭ್ಯವಿರುವ ಸಮಯವನ್ನು ಆಧರಿಸಿ, ಶಾಲಾ ಕಾಲೇಜುಗಳ ಸಮಯವನ್ನು ಹೊರತುಪಡಿಸಿ ಒಂದು ವೇಳಾಪಟ್ಟಿಯನ್ನು ತಯಾರಿಸಿಕೊಳ್ಳಿ.
  • ನಿಮಗೆ ಇಷ್ಟವಿರುವ ವಿಷಯ( subject) ದಿಂದ ಆ ದಿನದ ಅಭ್ಯಾಸವನ್ನು ಆರಂಭಿಸಿದರೆ ಓದಿನಲ್ಲಿ ಆಸಕ್ತಿ ಕುದುರುತ್ತದೆ‌.
  • ಗಣಿತ, ಭೌತಶಾಸ್ತ್ರಗಳಂತಹ ವಿಷಯವನ್ನು ಬೆಳಗಿನ ಜಾವ ಓದಿದರೆ, ಚೆನ್ನಾಗಿ ಮನಸ್ಸಿಗೆ ನಾಟುವಲ್ಲಿ ಸಹಾಯವಾಗುತ್ತದೆ. ಈ ವಿಷಯಗಳ ನಿರಂತರ ಅಭ್ಯಾಸ ನಿಮ್ಮಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವುದರಿಂದ ಓದಿನ ವೇಳಾಪಟ್ಟಿಯಲ್ಲಿ ಇವುಗಳಿಗೆ ಹೆಚ್ಚಿನ ಸಮಯಾವಕಾಶ ಕಲ್ಪಿಸಿಕೊಡಿ.
  • ತಲೆ ನೋವು ಬರಿಸುವ ಅಥವಾ ಇಷ್ಟವಿಲ್ಲದ, ಕಷ್ಟಕರವಾದ ವಿಷಯಗಳ ಅಭ್ಯಾಸಕ್ಕಾಗಿ ಅಮ್ಮ,ಅಪ್ಪ, ಅಕ್ಕ, ಅಣ್ಣ ಮುಂತಾದವರ ಸಹಾಯ ಪಡೆದುಕೊಳ್ಳಿ. ಕಲಿತ ಪ್ರಶ್ನೋತ್ತರಗಳನ್ನು ಅವರಿಗೆ ಒಪ್ಪಿಸುವುದರಿಂದ ತಪ್ಪುಗಳನ್ನು ತಿದ್ದಿಕೊಳ್ಳಲು ಅವಕಾಶ ದೊರೆತಂತಾಗುತ್ತದೆ.
  • ಪ್ರತಿಯೊಂದು ಪಾಠವನ್ನೂ ಸುಲಭ, ಮಾಧ್ಯಮ ಹಾಗೂ ಕಠಿಣ ಎಂದು ವಿಭಾಗಿಸಿಕೊಂಡು, ಸುಲಭ ಹಾಗೂ ಮಧ್ಯಮ ಪಾಠಗಳನ್ನು ಅತ್ಯಂತ ನಿಖರವಾಗಿ ಕಲಿಯಿರಿ. ಕಷ್ಟದ ಪಾಠಗಳಲ್ಲಿ ಕೇವಲ ವಾರ್ಷಿಕ ಪರೀಕ್ಷೆಯಲ್ಲಿ ಪದೇ ಪದೇ ಕೇಳಿರುವ ಪ್ರಶ್ನೆಗಳನ್ನು ಮಾತ್ರ ಓದಿಕೊಳ್ಳಿ.
  • ಕನಿಷ್ಠ ಪಕ್ಷ ಆರರಿಂದ ಏಳು ಗಂಟೆ ಒಳ್ಳೆಯ ನಿದ್ರೆಯನ್ನು ಮಾಡಿ. ನಿದ್ರೆಯು ನಿಮ್ಮ ಮನಸ್ಸನ್ನು ಹಗುರಗೊಳಿಸುವುದಲ್ಲದೆ ಏಕಾಗ್ರತೆಯನ್ನು ಹೆಚ್ಚಿಸುತ್ತದೆ.
  • ಕಲಿಕೆಯ ಮಧ್ಯೆ ಪುಟ್ಟ ಪುಟ್ಟ ವಿರಾಮಗಳಿರಲಿ. ಇದು ನಿಮ್ಮ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ‌.
  • "ನಿಮ್ಮ ವಿಶ್ವಾಸದಂತೆ ನೀವಾಗುತ್ತೀರಿ". ಆದ್ದರಿಂದ ನಿಮ್ಮ ಬಗ್ಗೆ ನಿಮಗೆ ಆತ್ಮವಿಶ್ವಾಸವಿರಲಿ . ಆದರೆ ಅತಿಯಾದ ಆತ್ಮವಿಶ್ವಾಸ ಬೇಡ.
  • ಎಲ್ಲಾ ವಿಷಯಗಳಿಗೂ ಸಮಾನ ಪ್ರಾಧಾನ್ಯತೆಯನ್ನು ನೀಡಿ. ನಿಮಗೆ ಸುಲಭವೆನಿಸುವ ಭಾಷಾ ವಿಷಯಗಳಿಗೂ ಆದ್ಯತೆ ನೀಡಿದರೆ, ಒಟ್ಟಾರೆ ಅಂಕಗಳು ಹೆಚ್ಚಾಗುತ್ತದೆ ಎಂಬುದು ನೆನಪಿರಲಿ.
  • ಶಾಲೆಯಲ್ಲಿ ಮಾಡುವ ಪುನರಾವರ್ತನಾ ತರಗತಿಗಳನ್ನು ತಪ್ಪಿಸಿಕೊಳ್ಳದಿರಿ. ಇವು ನಿಮ್ಮ ಕಲಿಕೆಯನ್ನು ಸುಲಭಗೊಳಿಸುವುದಲ್ಲದೆ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿಕೊಳ್ಳಲು ಸಹಕಾರಿಯಾಗುತ್ತದೆ.
  • ಪರೀಕ್ಷಾ ದಿನಗಳ ಹೊಸ್ತಿಲಿನಲ್ಲಿರುವಾಗ ಹೊರಗಡೆಯ ತಿಂಡಿ-ತೀರ್ಥಗಳನ್ನು, ತಂಪು ಪಾನೀಯಗಳನ್ನು ಸೇವಿಸದಿರಿ. ನಿಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ನಿಗಾ ವಹಿಸಿ.
  • ಕಳೆದ ಹತ್ತು ವರ್ಷಗಳ ಪ್ರಶ್ನೆ ಪತ್ರಿಕೆಯನ್ನು ತಿರುವಿ ಹಾಕುವುದನ್ನು ಮರೆಯದಿರಿ.
  • ಮೊಬೈಲ್ ಹಾಗೂ ಅಂತರ್ಜಾಲಗಳಿಂದ ಆದಷ್ಟು ದೂರವಿರಿ. ಇದು ನಿಮ್ಮ ಸಮಯವನ್ನು ಉಳಿಸುವುದಲ್ಲದೆ, ಏಕಾಗ್ರತೆಗೆ ಅನುವು ಮಾಡಿಕೊಡುತ್ತದೆ.
  • ಪದೇ ಪದೇ ಸ್ನೇಹಿತರಿಗೆ ಕರೆ ಮಾಡಿ, ಅವರ ಪರೀಕ್ಷಾ ತಯಾರಿ ಹೇಗೆ ನಡೆಯುತ್ತಿದೆ ಎಂಬುದನ್ನು ತಿಳಿಯುವ ಕುತೂಹಲ ಬೇಡ. ಇದರಿಂದಾಗಿ ನಿಮ್ಮಲ್ಲಿ ಆತಂಕ ಹೆಚ್ಚುತ್ತದೆಯೇ ಹೊರತು ಮತ್ತಾವ ಪ್ರಯೋಜನವೂ ಇಲ್ಲ.
  • ಓದಿದ ವಿಷಯಗಳಲ್ಲಿ ಪ್ರಮುಖವಾದ ಅಂಶಗಳನ್ನು ಒಂದೆಡೆ ಬರೆದಿಟ್ಟುಕೊಳ್ಳುವ ಹವ್ಯಾಸ ಬೆಳೆಸಿಕೊಳ್ಳಿ. ಸಮಯ ದೊರೆತಾಗಲೆಲ್ಲಾ ಇದನ್ನು ಪರಿಶೀಲಿಸುತ್ತಿದ್ದರೆ ಓದಿದ ವಿಷಯಗಳು ಮನನವಾಗಿ ಅಗತ್ಯ ಬಿದ್ದಾಗ ನೆನಪಿಸಿಕೊಳ್ಳಲು ಸುಲಭವಾಗುತ್ತದೆ.
  • ಕಂಠಪಾಠ ಮಾಡಬೇಕಾಗಿರುವ ವ್ಯಾಖ್ಯಾನಗಳನ್ನು, ಪದ್ಯಗಳನ್ನು ಜೋರಾಗಿ ಓದಿ, ಮೊಬೈಲಿನಲ್ಲಿ ರೆಕಾರ್ಡ್ ಮಾಡಿಕೊಂಡು, ಊಟದ ಸಮಯದಲ್ಲಿ, ಮಲಗುವ ಸಮಯದಲ್ಲಿ ಪದೇ ಪದೇ ಕೇಳಿಸಿಕೊಳ್ಳುವುದರಿಂದ ಸಿನಿಮಾ ಹಾಡುಗಳಂತೆ ನಿಮ್ಮ ನೆನಪಿನಲ್ಲಿ ಉಳಿದು ಹೋಗುತ್ತದೆ.
  • ಗಂಟೆಗಟ್ಟಲೆ ಒಂದೇ ವಿಷಯವನ್ನು ಓದದೆ, ವಿಷಯಾಂತರಿಸಿದರೆ ಏಕಾಗ್ರತೆ ಹೆಚ್ಚಾಗುವ ಸಾಧ್ಯತೆ ಅಧಿಕ.
  • ಕನ್ನಡ, ಇಂಗ್ಲಿಷ್ ಭಾಷೆಗಳಿಗೆ ಸಂಬಂಧಿಸಿದಂತೆ ಮನೆಯ ಹಿರಿಯರ ಸಹಾಯ ಪಡೆದುಕೊಳ್ಳಿ. ಪಾಠವನ್ನು ಕಥೆಯ ರೂಪದಲ್ಲಿ ಹೇಳಿಸಿಕೊಳ್ಳಿ. ಇದು ನಿಮ್ಮ ಸೃತಿ ಪಟಲದಲ್ಲಿ ಅಚ್ಚೊತ್ತಿದ ಹಾಗೆ ಉಳಿಯುತ್ತದೆ.
  • ಪರೀಕ್ಷೆ ಕೊಠಡಿಯಲ್ಲಿ ಪ್ರಶ್ನೆ ಪತ್ರಿಕೆಯನ್ನು ಓದಲು ಸಿಗುವ ಸಮಯವನ್ನು ಸಂಪೂರ್ಣವಾಗಿ ಉಪಯೋಗಿಸಿಕೊಳ್ಳಿ. ಪ್ರಶ್ನೆಗಳನ್ನು ಒಂದಲ್ಲ ಎರಡು ಬಾರಿ ಓದಿ, ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ.
  • ಪ್ರಶ್ನೆಗಳಿಗೆ ನಿಖರವಾದ ಉತ್ತರಗಳನ್ನು ಬರೆಯಿರಿ. ಅನಗತ್ಯವಾಗಿ ಲಂಭಿಸುವುದು ಬೇಡ. ಅನಗತ್ಯವಾದ ಸುಧೀರ್ಘ ಉತ್ತರಗಳಿಂದ ಸಮಯದ ಅಭಾವ ಉಂಟಾಗಬಹುದು.
  • ಯಾವುದೇ ಪ್ರಶ್ನೆಗಳನ್ನು ಉತ್ತರಿಸದೆ ಬಿಡಬೇಡಿ. ಕೊನೆಯ ಗಳಿಗೆವರೆಗೂ ಆಲೋಚಿಸಿ ತೋಚಿದ ಅತ್ಯಂತ ಹತ್ತಿರದ ಉತ್ತರವನ್ನಾದರೂ ಬರೆಯಿರಿ.
  • &ಪರೀಕ್ಷೆ ಬರೆದ ನಂತರ ಉತ್ತರ ಪತ್ರಿಕೆಯನ್ನು ಮತ್ತೊಮ್ಮೆ ಪರಿಶೀಲಿಸುವುದನ್ನು ಮರೆಯದಿರಿ ಪ್ರಶ್ನೆಗಳ ಸಂಖ್ಯೆಗಳನ್ನು ಸರಿಯಾಗಿ ನಮೂದಿಸಿರುವುದಾಗಿ ಖಾತ್ರಿಪಡಿಸಿಕೊಳ್ಳಿ.

    ನೆನಪಿರಲಿ. ಪರೀಕ್ಷೆ ಯು ಜೀವನದಲ್ಲಿ ಒಂದು ಮಹತ್ವದ ಘಟ್ಟ. ಆದರೆ ಪರೀಕ್ಷೆಯೇ ಜೀವನವಲ್ಲ. ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವವರು ನೀವೇ ಆಗಿರುತ್ತೀರಿ. ಮಿಂಚಿಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ ಆದ್ದರಿಂದ ಕಾಲಾ ಮಿಂಚುವ ಮೊದಲೇ ಈಗಿಂದಲೇ ಅಭ್ಯಾಸವನ್ನು ಆರಂಭಿಸಿ.

    ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಎದುರಿಸಿ.

    ಉತ್ತಮ ಫಲಿತಾಂಶವನ್ನು ನಿಮ್ಮದಾಗಿಸಿಕೊಳ್ಳಿ.

    ಅರುಣ ರಾವ್

    ಶಿಕ್ಷಕರು

    ಅರುಣಾ ರಾವ್

    ಲೇಖಕರು

    Chief Editor & Author

    ವಿದ್ಯಾರ್ಥಿಗಳಿಗೆ ಸರಳ, ನಿಖರ ಹಾಗೂ ಉಪಯುಕ್ತ ಶೈಕ್ಷಣಿಕ ಮಾಹಿತಿ, ಭಾಷಣಗಳು ಮತ್ತು ವಿಜ್ಞಾನ ಮಾರ್ಗದರ್ಶನ ನೀಡುತ್ತಿರುವ ಮುಖ್ಯ ಸಂಪಾದಕರು.